ನಗರ ಸಮಸ್ಯೆ ಪರಿಹಾರಕ್ಕೆ ಡಿಜಿಟಲ್‌ ಟ್ವಿನ್‌ ಚಿಂತನೆ

KannadaprabhaNewsNetwork |  
Published : Oct 13, 2026, 03:45 AM ISTUpdated : Oct 13, 2026, 04:16 AM IST
GBA

ಸಾರಾಂಶ

ನಗರದ ಸಮಸ್ಯೆಗಳ ಅಧ್ಯಯನ, ಪರಿಹಾರಕ್ಕೆ ಕೃತಕ ಬುದ್ಧಿಮತ್ತೆಯ ‘ಡಿಜಿಟಲ್ ಟ್ವಿನ್’ ತಂತ್ರಜ್ಞಾನ ಬಳಕೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.ಡಿಜಿಟಲ್ ಟ್ವಿನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕುರಿತು ಜಿಬಿಎ ಎಂಜಿನಿಯರುಗಳಿಗೆ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಿಂದ ಪುರಭವನದಲ್ಲಿ ಸೋಮವಾರ ವಿಚಾರ ಸಂಕಿರಣ, ಕಾರ್ಯಾಗಾರ ಆಯೋಜಿಸಲಾಗಿತ್ತು.

ಬೆಂಗಳೂರು : ನಗರದ ಸಮಸ್ಯೆಗಳ ಅಧ್ಯಯನ, ಪರಿಹಾರಕ್ಕೆ ಕೃತಕ ಬುದ್ಧಿಮತ್ತೆಯ ‘ಡಿಜಿಟಲ್ ಟ್ವಿನ್’ ತಂತ್ರಜ್ಞಾನ ಬಳಕೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.

ಡಿಜಿಟಲ್ ಟ್ವಿನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕುರಿತು ಜಿಬಿಎ ಎಂಜಿನಿಯರುಗಳಿಗೆ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಿಂದ ಪುರಭವನದಲ್ಲಿ ಸೋಮವಾರ ವಿಚಾರ ಸಂಕಿರಣ, ಕಾರ್ಯಾಗಾರ ಆಯೋಜಿಸಲಾಗಿತ್ತು.

ರಸ್ತೆ, ಕಟ್ಟಡ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌, ವಿದ್ಯುತ್ ಜಾಲ, ಬೀದಿ ದೀಪ, ಕೆರೆ, ಉದ್ಯಾನಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳ ಮಾಹಿತಿಯನ್ನು ತ್ರಿಡಿ, ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಸಂಯೋಜಿಸಲಾಗುತ್ತದೆ. ಆ ಮಾಹಿತಿ ಮೇಲ್ವಿಚಾರಣೆ, ವಿಶ್ಲೇಷಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಮುಂಚಿತವಾಗಿ ಅರಿಯಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಜಿಬಿಎ ಹೇಳಿದೆ.

ಡಿಜಿಟಲ್ ಟ್ವಿನ್ ತಂತ್ರಜ್ಞಾನ ಬಳಕೆಯತ್ತ ಪಾಲಿಕೆಯಿಂದ ಹೆಜ್ಜೆ

ಜನಕೇಂದ್ರಿತ ಆಡಳಿತವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಇತ್ತೀಚೆಗೆ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಗೆ ಮಾರ್ಗದರ್ಶಿ ಸೂಚನೆಗಳನ್ನು ಹೊರಡಿಸಿದ ಈ ಹಿನ್ನೆಲೆಯಲ್ಲಿ ಡಿಜಿಟಲ್ ಟ್ವಿನ್ ತಂತ್ರಜ್ಞಾನ ಬಳಕೆಯತ್ತ ಪಾಲಿಕೆಯಿಂದ ಹೆಜ್ಜೆ ಇಡಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಸಂಚಾರ ಪೊಲೀಸ್ ಇಲಾಖೆಯು ಡಿಜಿಟಲ್ ಟ್ವಿನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ತಂತ್ರಜ್ಞಾನವನ್ನು ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ದತ್ತಾಂಶ ವಿಶ್ಲೇಷಣೆ ಹಾಗೂ 3ಡಿ ಮಾದರಿಗಳ ನಿರ್ಮಾಣದ ಮೂಲಕ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ಬಿ-ಸ್ಮೈಲ್ ಸಿಇಒ ನಿತೀಶ್ ಹೇಳಿದ್ದಾರೆ.

ವೈಟ್ ಟಾಪಿಂಗ್ ಕಾಮಗಾರಿ, ಫ್ಲೈಓವರ್‌ಗಳ ನಿರ್ಮಾಣ, ಪ್ರವಾಹ ನಿರ್ವಹಣೆ, ಬೀದಿ ದೀಪಗಳ ಅಳವಡಿಕೆ, ಪಾದಚಾರಿ ಮಾರ್ಗಗಳ ಸುಧಾರಣೆ, ಜಂಕ್ಷನ್‌ಗಳ ಅಭಿವೃದ್ಧಿ, ಮಳೆನೀರು ಚರಂಡಿಗಳ ನಿರ್ವಹಣೆ, ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸುವಾಗ ಡಿಜಿಟಲ್ ಟ್ವಿನ್ ತಂತ್ರಜ್ಞಾನ ಬಹಳ ನೆರವಾಗುತ್ತದೆ ಎಂದು ದಕ್ಷಿಣ ನಗರ ಪಾಲಿಕೆ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ತಿಳಿಸಿದರು.

ಏನಿದು ಡಿಜಿಟಲ್ ಟ್ವಿನ್?

ರಸ್ತೆ ಮತ್ತಿತರ ಮೂಲಸೌಕರ್ಯದ ಡಿಜಿಟಲ್ ಪ್ರತಿರೂಪ ಅಥವಾ ವರ್ಚುವಲ್ ಮಾದರಿಯನ್ನು ಡಿಜಿಟಲ್ ಟ್ವಿನ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ನಗರದ ರಸ್ತೆಯೊಂದರಲ್ಲಿ ಮಳೆನೀರು ನಿಲ್ಲುವ ಸಮಸ್ಯೆ ಎದುರಾದರೆ, ಆ ರಸ್ತೆಯ ಎತ್ತರ, ಇಳಿಜಾರು, ಚರಂಡಿ ವ್ಯವಸ್ಥೆ, ಮಳೆಯ ಪ್ರಮಾಣ ಮತ್ತು ನೀರಿನ ಹರಿವಿನ ಮಾಹಿತಿಯನ್ನು ಡಿಜಿಟಲ್ ಟ್ವಿನ್ ಮೂಲಕ ವಿಶ್ಲೇಷಿಸಬಹುದು. ಇದರಿಂದ ನೀರು ಯಾವ ಸ್ಥಳದಲ್ಲಿ ಸಂಗ್ರಹವಾಗುತ್ತದೆ ಹಾಗೂ ಸಮಸ್ಯೆಯನ್ನು ಪರಿಹರಿಸಲು ಯಾವ ಭಾಗದಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ವಿವಿಧ ಕಾಮಗಾರಿಗಳ ಕಡತಗಳು 2 ತಿಂಗ್ಳಿಂಧ ಸಚಿವರ ಬಳಿ ಇದೆ ಏಕೆ
ಕಲ್ಲಿನಿಂದ ತಲೆ ಜಜ್ಜಿ 13 ವರ್ಷದ ಬಾಲಕನ ಹತ್ಯೆ