ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಸರಾಳು ಹೋಬಳಿ ಕೇಂದ್ರವಾಗಿದೆ. ಇದನ್ನು ತಾಲೂಕು ಕೇಂದ್ರವಾಗಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.ತಾಲೂಕಿನ ಬಸರಾಳು ಗ್ರಾಮದಲ್ಲಿ ಬಸರಾಳು-ಮುತ್ತೇಗೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸರಾಳು ಮಂಡ್ಯ ನಗರದಿಂದ 26 ಕಿ.ಮೀ. ದೂರದಲ್ಲಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಕಚೇರಿ ಸೇರಿದಂತೆ ಇನ್ನಿತರೆ ವ್ಯವಹಾರಗಳಿಗೆ ಬರಬೇಕಾದರೆ ಬಹಳ ದೂರ ಕ್ರಮಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರವಾಗಿ ಬೆಳೆದಿರುವ ಬಸರಾಳನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದರು.
10 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ:ಬಸರಾಳು-ಮುತ್ತೇಗೆರೆ ರಸ್ತೆಯು ಸುಮಾರು 25 ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಪ್ರಸ್ತುತ ಕಾಲ ಕೂಡಿ ಬಂದಿದೆ. 10 ಕೋಟಿ ರು. ವೆಚ್ಚದಲ್ಲಿ 4.43 ಕಿ.ಮೀ. ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಈ ಭಾಗದಲ್ಲಿ ಸುಮಾರು 75 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇನ್ನೂ 15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಟೆಂಡರ್ ಕರೆಯಬೇಕಾಗಿದೆ ಎಂದರು.
ಮಾಚಗೌಡನಹಳ್ಳಿ-ಬಾಳೇನಹಳ್ಳಿ ರಸ್ತೆ, ಬಸರಾಳು-ಕಂಬದಹಳ್ಳಿ ರಸ್ತೆಗೆ 4.5 ಕೋಟಿ, ಅಂಕುಶಾಪುರ ಕೆರೆ ಕೋಡಿ ಮತ್ತು ಸೇತುವೆ, ಬೆನ್ನಹಟ್ಟಿ ಕೆರೆ ಕೆಳಭಾಗ ಸೇತುವೆಗೆ ಒಟ್ಟು 2.5 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.ಸುಮಾರು ವರ್ಷಗಳಿಂದ ನಂಜೇನಹಳ್ಳಿಗೆ ರಸ್ತೆಯೇ ಆಗಿರಲಿಲ್ಲ. ಇದಕ್ಕೂ 60 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಬಸರಾಳು ಬಸ್ ನಿಲ್ದಾಣ ಕಾಮಗಾರಿಗೆ ಟೆಂಡರ್‌ದಾರರು ಶೇ.25ಕ್ಕಿಂತ ಕಡಿಮೆ ಬಿಡ್ ಮಾಡಿದ್ದರಿಂದ ಪುನಃ ಹೊಸದಾಗಿ ಟೆಂಡರ್ ಕರೆಯುವಂತೆ ತಿಳಿಸಲಾಗಿದೆ. ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಚಿಕ್ಕಮಂಡ್ಯ-ಬಿಳಿದೇಗಲು ವರೆಗಿನ ರಸ್ತೆಯ ಅಭಿವೃದ್ಧಿಗೆ 10 ಕೋಟಿ ರು. ಟೆಂಡರ್ ಆಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ, ನಾವು ಅಧಿಕಾರದಲ್ಲಿದ್ದಾಗ ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆವೋ ಅವುಗಳೇ ನಮ್ಮ ಹೆಸರನ್ನು ತಂದುಕೊಡುತ್ತವೆ ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ತಾ.ಪಂ. ಮಾಜಿ ಸದಸ್ಯ ಮಂಜೇಗೌಡ, ಗ್ರಾಪಂ ಅಧ್ಯಕ್ಷ ಜವರಪ್ಪ, ಸದಸ್ಯ ರಾಜು, ಉದ್ಯಮಿ ರವಿ ಬೋಜೇಗೌಡ, ಕಾಂಗ್ರೆಸ್ ಮುಖಂಡ ಪ್ರದೀಪ್ ಹಾಜರಿದ್ದರು.