ಕನ್ನಡಪ್ರಭ ವಾರ್ತೆ ಕಡೂರು
ಕಡೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಅವರು ಪಟ್ಟಣದ ಕೋರ್ಟ್ ಮುಂಭಾಗದಲ್ಲಿ ನಗರೋತ್ಥಾನ ಯೋಜನೆಯಲ್ಲಿ ₹1. 25 ಕೋಟಿ ವೆಚ್ಚದ ಚರಂಡಿ ಮತ್ತಿತರ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರಿಗೆ ಕಡೂರು ಪುರಸಭೆಯನ್ನು ನಗರಸಭೆಯಾಗಿ ಪರಿವರ್ತಿಸಲು ಮಾಡಿದ್ದ ಮನವಿಗೆ ಕ್ರಮ ಕೈಗೊಳ್ಳುವುದಾಗಿ ಕಳೆದ ಡಿಸೆಂಬರ್‌ನಲ್ಲಿ ಭರವಸೆ ನೀಡಿದ್ದರು, ಪುರಸಭೆಯಿಂದಲೂ ನಗರಸಭೆ ಯೋಜನೆ ಅಂತಿಮಗೊಂಡಿದೆ. ಇದಕ್ಕೆ ನಗರ ಮತ್ತು ಗ್ರಾಮಾಂತರ ಯೋಜನೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ. ಈ ವಾರದಲ್ಲಿ ಪುರಸಭೆಯಿಂದ ರಾಜ್ಯ ಸರ್ಕಾರಕ್ಕೆ ಯೋಜನೆ ಸಲ್ಲಿಕೆಯಾಗಲಿದೆ. ಆದಷ್ಟು ಬೇಗ ಅದಕ್ಕೆ ಕ್ಯಾಬಿನೆಟ್ಟಲ್ಲಿ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ಭರವಸೆ ನೀಡಿದರು.ಕಡೂರು ಪುರಸಭೆಯು ಎಚ್ಚೆತ್ತುಕೊಂಡು ಪುರಸಭೆಯ ಸುಮಾರು ₹20 ಕೋಟಿ ವೆಚ್ಚದ 15 ಸಾವಿರ ಅಡಿ ಜಾಗ ತೆರವುಗೊಳಿಸಿದ್ದು, ಎಮ್ಮೇದೊಡ್ಡಿ ರಸ್ತೆ ಕೆ.ಹೊಸಹಳ್ಳಿಯಲ್ಲಿ ಸುಮಾರು 16 ಸಾವಿರ ಅಡಿ ಜಾಗವನ್ನು ಪುರಸಭೆ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಎಮ್ಮೇದೊಡ್ಡಿಯಲ್ಲಿ ಸರಕಾರದ ಸುಮಾರು 15 ಎಕರೆ ಜಾಗದಲ್ಲಿ ಈ ಹಿಂದೆ ಕಡೂರು ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಎಚ್.ಎಸ್.ಮಂಜುನಾಥ್ ಮತ್ತಿತರರು ಎಂಬುವರು ಅನಧಿಕೃತವಾಗಿ ಸಾಗುವಳಿ ಮಾಡಿ ವೈಭವ ಪೂರಕ ರೆಸಾರ್ಟ್ ರೀತಿ ಮಾಡಿ ಪುರಸಭೆ ಐ ಮಾಸ್ಟ್ ಲೈಟ್ ಹಾಕಿ ಕೃಷಿ ಹೊಂಡವನ್ನು ಈಜುಕೊಳದ ರೀತಿ ಮಾಡಿಕೊಂಡು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಅಧಿಕಾರಿಗಳು ಮೋಜು ಮಸ್ತಿ ಮಾಡುವ ಜಾಗ ಮಾಡಿಕೊಂಡಿದ್ದರು. ಅದನ್ನು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ನೇರವಾಗಿ ಸೂಚನೆ ನೀಡಿದಂತೆ 48 ಗಂಟೆಯೊಳಗೆ ಅರಣ್ಯ ಇಲಾಖೆ ಜಿಲ್ಲಾ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತೆರವು ಮಾಡಿಸಿ ₹10 ಕೋಟಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಯಾರೇ ಸರ್ಕಾರಿ ಜಾಗ ಒತ್ತುವರಿ ಮಾಡಿದಲ್ಲಿ ತೆರವು ಮಾಡಿಸಲಾಗುವುದು ಎಂದು ಶಾಸಕ ಆನಂದ್ ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಒತ್ತುವರಿ ಆಗಿರುವ ಕೆರೆಗಳ ಸರ್ವೇ ಮಾಡಿಸಲು ಸೂಚನೆ ನೀಡಿದ್ದು ಅದರಂತೆ ಇಲ್ಲಿ ತಾಲೂಕು ಆಡಳಿತವು ಕ್ರಮ ಕೈಗೊಳ್ಳಲಿದೆ ಎಂದರು.₹1.25 ಕೋಟಿ ಅನುದಾನದಲ್ಲಿ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕೋರ್ಟ್ ರಸ್ತೆಯಿಂದ ಆಂಜನೇಯ ಸ್ವಾಮಿ ದೇವಾಲಯದ ವೃತ್ತದ ವರೆಗೆ ಚರಂಡಿ ನಿರ್ಮಾಣ ಮತ್ತು ವಿವಿಧ ಭಾಗಗಳಲ್ಲಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಲ್ಲಿ ಬಿಡುಗಡೆಯಾಗಿರುವ ₹1.25 ಕೋಟಿ ಅನುದಾನದಲ್ಲಿ ತುರ್ತಾಗಿ ಆಗಬೇಕಾಗಿರುವ ಕಾಮಗಾರಿ ಮಾಡಲಾಗುವುದು. ನಮ್ಮ ಶಾಸಕರು ಕಡೂರು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಅನುದಾನ ತರುವುದಾಗಿ ಭರವಸೆ ನೀಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕಳಿಸಿದ್ದಾರೆ ಎಂದರು.ಹಿರಿಯ ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ನಗರೋತ್ಥಾನದಲ್ಲಿ ಪಟ್ಟಣದಾದ್ಯಂತ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕೆ ನಮ್ಮ ಶಾಸಕರಾದ ಆನಂದ್ ರವರು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಬಹಳಷ್ಟು ಕಾಳಜಿ ವಹಿಸಿದ್ದಾರೆ ಗುತ್ತಿಗೆದಾರರು ಉತ್ತಮವಾಗಿ ಕಾಮಗಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮಂಡಿಎಕ್ಬಾಲ್, ಮೋಹನ್, ಶ್ರೀಕಾಂತ್, ಸಿಬ್ಬಂದಿ ತಿಮ್ಮಯ್ಯ, ಜಗದೀಶ್, ಮರಿಯಪ್ಪ, ಮುಖಂಡರಾದ ಶ್ರೀಕಂಠ ವಡೆಯರ್, ಹುಚ್ಚಪ್ಪ, ಚಿನ್ನರಾಜು, ಶಿವೇಗೌಡ, ಗುತ್ತಿಗೆದಾರ ಅವಿನಾಶ್ ಮತ್ತಿತರರು ಹಾಜರಿದ್ದರು.