ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಾತಿ ಕುರಿತು ರಾಜ್ಯಪಾಲರಿಗೆ ಪ್ರಸ್ತಾಪನೆ ಕಳುಹಿಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಈ ಹಿಂದೆ ಕೆಎಎಸ್, ಐಎಎಸ್ ಅಧಿಕಾರಿಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡುತ್ತಿದ್ದರು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿ.ವಿ. ಪ್ರೊಫೆಸರ್‌ಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿದ್ದಾರೆ. ಈಗ ನಾವು ಐಎಎಸ್, ಕೆಎಎಸ್ ಅಧಿಕಾರಿಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡ್ತೇವೆ ಎಂದರು.
ಕುವೆಂಪು ವಿ.ವಿ.ಯಲ್ಲಿ ಸ್ಮಾರ್ಟ್ ಕ್ಲಾಸ್ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ಮಾರ್ಟ್ ಕ್ಲಾಸ್ ಅವ್ಯವಹಾರ ವಿ.ವಿ.ಯ ಆಂತರಿಕ ವಿಚಾರ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಈ ಹಿಂದಿನ ವಿಸಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ತನಿಖೆ ಕುರಿತು ಪ್ರತಿಕ್ರಿಯಿಸಿ, ತನಿಖೆ ನಡೆಯುತ್ತಿದೆ. ರಾಜ್ಯಪಾಲರ ಗಮನದಲ್ಲಿದೆ. ವಸ್ತುಸ್ಥಿತಿ ಅರಿತು ತನಿಖೆ ನಡೆಸಬೇಕಾಗುತ್ತದೆ ಎಂದು ಹೇಳಿದರು.ಕಾಯಮಾತಿಗೆ ಕಾನೂನು ತೊಡಕು:
ಅತಿಥಿ ಉಪನ್ಯಾಸಕರ ಸಮಸ್ಯೆ 20 ವರ್ಷದಿಂದ ಇರುವುದಾಗಿದೆ. ಎಲ್ಲರೂ ಕಾಯಮಾತಿ ಮಾಡಿ ಅಂತಾರೆ. ಉಮಾದೇವಿ ಪ್ರಕರಣದ ನಂತರ ಕಾಯಂ ಮಾಡಲು ಬರಲ್ಲ. ಬಹಳ ಜವಾಬ್ದಾರಿಯುತವಾಗಿ ಹಿಂದಿನ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಸಂಬಳ ಹೆಚ್ಚು ಮಾಡುವ ಕೆಲಸ ಮಾಡಿದ್ದೇವೆ. ಕಾಯಂ ಮಾಡುವ ಕುರಿತು ಕಾನೂನು ತೊಡಕು ಬಹಳ ಇವೆ. ಅತಿಥಿ ಉಪನ್ಯಾಸಕರಿಗೆ ನಮ್ಮ ಸರ್ಕಾರ ಬಂದ ನಂತರ ಸೌಲಭ್ಯ ಹೆಚ್ಚು ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಯುವನಿಧಿ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಉದ್ಯೋಗಾವಕಾಶ ಲಭಿಸುವ ಬದಲಾವಣೆ ಮಾಡಬೇಕು. ಕೌಶಲ್ಯಕ್ಕೆ ಪ್ರಾಧಾನ್ಯತೆ ಕೊಡಬೇಕು. ಕೈಗಾರಿಕೆಗಳು ಕೌಶಲ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿವೆ. ರಾಜ್ಯದ ಐದು ಭಾಗಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ಕಡಿಮೆ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶ ಎಂದರು.
- - - (-ಫೋಟೋ: ಎಂ.ಸಿ.ಸುಧಾಕರ್)