- ವಿಧಾನಸಭೆ ಅಧಿವೇಶನ ಹಿನ್ನೆಲೆ ಶಾಸಕರಿಗೆ ಜನಪರ ಹೋರಾಟ ವೇದಿಕೆ ಒತ್ತಾಯ - - -
ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರಾತಿ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕೋರಿ, ಜನಪರ ಹೋರಾಟ ವೇದಿಕೆ ವತಿಯಿಂದ ಶಾಸಕ ಬಿ.ಪಿ.ಹರೀಶ್ ಅವರಿಗೆ ಮನವಿ ಅರ್ಪಿಸಲಾಯಿತು. ವೇದಿಕೆ ಸಂಚಾಲಕ ಜೆ.ಕಲೀಂಬಾಷಾ ಮಾತನಾಡಿ, ಜಿಲ್ಲೆಯಲ್ಲಿ ದಾವಣಗೆರೆಯ ನಂತರ ಹರಿಹರ ದೊಡ್ಡ ನಗರವಾಗಿದೆ. ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನದ ಮೂಲಕ ದಕ್ಷಿಣಕಾಶಿ ಎಂಬ ಖ್ಯಾತಿ ಸಹ ಹರಿಹರ ಹೊಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು ೨೦ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಬ್ಯಾಂಕು, ಹೋಟೆಲ್, ವಸತಿ ಗೃಹ, ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದ ಅಧ್ಯಾತ್ಮಿಕ ಕೇಂದ್ರಗಳಿವೆ ಎಂದರು.
ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ನಗರದೊಳಗೆ ಬೀರೂರು-ಸಮ್ಮಸಗಿ (ಹಳೇ ಪಿ.ಬಿ.ರಸ್ತೆ) ಮತ್ತು ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ (ಪೂನಾ-ಬೆಂಗಳೂರು ರಸ್ತೆ) ಇದೆ. ನಿತ್ಯ ನಗರದೊಳಗೆ ೧೪೦೦ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ೫೦ ಸಾವಿರಕ್ಕೂ ಹೆಚ್ಚು ಭಾರಿ ಮತ್ತು ಲಘು ವಾಹನಗಳ ಸಂಚಾರವಿದೆ ಎಂದು ತಿಳಿಸಿದರು.ಇದೆಲ್ಲದರ ಪರಿಣಾಮ ನಗರದೊಳಗಿನ ಪ್ರಮುಖ ರಸ್ತೆ, ವ್ಯಾಪಾರ ಸ್ಥಳಗಳಲ್ಲಿ ಜನ ಹಾಗೂ ವಾಹನಗಳ ಸಂಚಾರ ಅಧಿಕವಾಗಿದೆ. ರಸ್ತೆಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲುಗಡೆ ಮಾಡಲಾಗುತ್ತಿದೆ. ಫುಟ್‌ಪಾತ್‌ಗಳೆಲ್ಲಾ ಅಂಗಡಿ, ಮುಂಗಟ್ಟುಗಳಿಂದ ಅಕ್ರಮಿತವಾಗಿವೆ. ಪರಿಣಾಮವಾಗಿ ಪಾದಚಾರಿಗಳು, ಸೈಕಲ್ ಸವಾರರು, ಶಾಲಾ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಭಾರಿ ವಾಹನಗಳ ಜೊತೆಗೆ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಬೆಂಗಳೂರಿನಲ್ಲಿ ಜುಲೈ ೧೫ ರಿಂದ ಜುಲೈ ೨೬ರವರೆಗೆ ನಡೆಯುವ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ಸದರಿ ವಿಷಯವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನ ಸೆಳೆದು ನಗರಕ್ಕೆ ತುರ್ತಾಗಿ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಿಸಿಕೊಡಬೇಕಾಗಿ ಕೋರಿದರು.
- - -
- ಬಿ.ಪಿ.ಹರೀಶ್, ಶಾಸಕ, ಹರಿಹರ ಕ್ಷೇತ್ರ
-ಫೋಟೋ: