ಧಾರವಾಡ:
ಚಿತ್ರಕಲಾ ಶಿಲ್ಪಿ ಡಿ.ವಿ ಹಾಲಭಾವಿ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ಡಿ.ವಿ. ಹಾಲಭಾವಿ ಕುಂಚಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ಗೋಕಾಕ ಮೂಲದ ಹಿರಿಯ ಚಿತ್ರಕಲಾವಿದ ಸಿದ್ದಪ್ಪ ಸತ್ಯಪ್ಪ ಪಾಟೀಲ ಅವರಿಗೆ ಸಂದಿದೆ.ನ. 29ರಂದು ಸಂಜೆ 5.30ಕ್ಕೆ ಕರ್ನಾಟಕ ಆಲೂರು ವೆಂಕಟರಾವ್ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದು ₹ 1 ಲಕ್ಷ ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಸಿದ್ದಪ್ಪ ಅವರು ಚಿತ್ರಕಲೆ, ಕಲಾಕ್ಷೇತ್ರಕ್ಕೆ ತಮ್ಮ ಬದುಕು ಸವೆಸಿದವರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಶಿರಗಾವಿಯಲ್ಲಿ 1933ರಲ್ಲಿ ಜನಿಸಿದವರು. ಭಾರತೀಯ ಕಲಾ ಕೇಂದ್ರ ಪ್ರಾಚಾರ್ಯರಾಗಿ ಸೇವೆ ಆರಂಭಿಸಿ ನಿವೃತ್ತರಾದರು. ಪ್ರಸ್ತುತ ಗೋಕಾಕದಲ್ಲಿ ಚಿತ್ರಕಲಾ ಸೇವೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಸರಳವಾಗಿ ಮನಮುಟ್ಟುವಂತೆ ಕಲೆ ಹೇಳುವ ಕೌಶಲ್ಯ ಇವರಲ್ಲಿತ್ತು. ಅವರ ರೇಖಾ ಕೌಶಲ್ಯ ಎಂತಹರವನ್ನೂ ನಿಬ್ಬೆರಗಾಗಿಸುವಷ್ಟು ಪಕ್ವವಾಗಿದ್ದು, ಜೀವಮಾನದ ಸಾಧನೆಗೆ ಕೊಡ ಮಾಡುವ ಪ್ರಶಸ್ತಿ ಇದಾಗಿದೆ.
ಇನ್ನೆರೆಡು ಪ್ರಶಸ್ತಿ:ಇನ್ನು, ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಗದಗ ಮೂಲದ ಕಮಲ್ ಅಹ್ಮದ್ ಎಂ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ, ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಮಹಾರಾಷ್ಟ್ರ ಮೂಲದ ನಿಲೇಶ ಡಿ. ಭಾರ್ತಿ ಮತ್ತು ನಿಲಿಶಾ ಫಾಡ್ ಹಂಚಿಕೊಂಡಿದ್ದಾರೆ. ಈ ಪ್ರಶಸ್ತಿಯು ತಲಾ ₹ 50 ಸಾವಿರ ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ. ಆಯ್ಕೆ ಸಮಿತಿಯಲ್ಲಿ ಹಿರಿಯ ಚಿತ್ರಕಲಾವಿದರಾದ ಎಫ್.ವಿ. ಚಿಕ್ಕಮಠ, ಕರಿಯಪ್ಪ ಹಂಚಿನಮನಿ ಹಾಗೂ ಬಾಬು ಸದಲಗಿ ಇದ್ದರು.
ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದರಿಂದ ಚಿತ್ರಕಲಾ ಪ್ರಾತ್ಯಕ್ಷಿಕೆಯನ್ನು ನ. 28ರಂದು ಬೆಳಗ್ಗೆ 11ಕ್ಕೆ ಕೆಲಗೇರಿಯ ಜೆಎಸ್‌ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾಧಿಕಾರಿ ದಿವ್ಯಪ್ರಭು, ನಟ ಸುರೇಶ್ ಹೆಬ್ಳೀಕರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.