ಕನ್ನಡಪ್ರಭ ವಾರ್ತೆ ನಾಯಕನಹಟ್ಟಿಕೆಲವರು ನಾಯಕ ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಮುದಾಯ ಕವಲು ಹಾದಿಯಲ್ಲಿ ಸಾಗಿದರೆ ಸಮಾಜದ ಏಳಿಗೆ ಸಾಧ್ಯವಿಲ್ಲವೆಂದು ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ವಾಲ್ಮೀಕಿ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರದ ಆದೇಶದಂತೆ ಅ.17ರಂದು ಸಾಂಪ್ರದಾಯಿಕವಾಗಿ ವಾಲ್ಮೀಕಿ ಜಯಂತಿ ಆಚರಿಸೋಣ. ಏನೇ ಸಮಸ್ಯೆಗಳಿದ್ದರೂ ಸಮಾಜದ ಮುಖಂಡರು ಕೂಡಿ ಪರಿಹರಿಸಿಕೊಳ್ಳಬೇಕು. ಮುಖ್ಯವಾಗಿ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಯುವಕರು ಸಹ ಏಕವ್ಯಕ್ತಿ ನಿರ್ಣಯಕ್ಕೆ ಕಿವಿಗೊಡದೇ ಮುಖಂಡರ ಜತೆಗೂಡಿ ಸಮಾಜದ ಏಳಿಗೆಗೆ ಕೈಜೋಡಿಸಬೇಕು ಎಂದರು
ವಾಲ್ಮೀಕಿ ಜಯಂತಿ ಹಬ್ಬವನ್ನು ನಾವೇಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸೋಣ. ಈ ಭಾಗದಲ್ಲಿ ಸಮಾಜದವರು ಹೆಚ್ಚಾಗಿದ್ದು, ಪ್ರತಿಯೊಂದು ಹಳ್ಳಿಗಳಿಂದ ಹೆಚ್ಚಿನ ಜನರನ್ನು ಕರೆತರುವಂತೆ ಮುಖಂಡರುಗಳಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಯುವಕರು ಹೆಚ್ಚಿನ ಮುಂದಾಳತ್ವವನ್ನು ವಹಿಸಿಕೊಳ್ಳಬೇಕು ಎಂದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಟಂ ಲಿಂಗಯ್ಯ ಮಾತನಾಡಿ, ವಾಲ್ಮೀಕಿ ಜಯಂತಿಗೆ ಪಿಎಚ್.ಡಿ ಪದವಿ ಪಡೆದ ಪದವಿದಾರರಿಗೆ ಮತ್ತು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಬೇಕು. ವಾಲ್ಮೀಕಿ ಜಯಂತಿಗೆ ಅತೀ ಹೆಚ್ಚು ಹಣ ಖರ್ಚು ಮಾಡುವುದು ಬೇಡ, ಸರಳವಾಗಿ ಆಚರಿಸಿದರೆ ಸೂಕ್ತ ಎಂದು ಸಲಹೆ ನೀಡಿದರು.
ಬೋಸೇದೇರಹಟ್ಟಿಯ ಮುಖಂಡ ಜಿ.ಬಿ. ಮುದಿಯಪ್ಪ ಮಾತನಾಡಿ, ವಾಲ್ಮೀಕಿ ಸಮಾಜದ 5 ಸಾವಿರ ಜನರ ಸದಸ್ಯತ್ವ ಮಾಡಿಸಿದರೆ ನಮ್ಮ ಸಂಘಕ್ಕೆ ಲಾಭವಾಗುತ್ತದೆ. ಪ್ರತಿ ಬಾರಿ ಕೆಲವೊಂದು ಕಾಮಗಾರಿಗಳಿಗೆ ಕೈಗೆತ್ತಿಕೊಂಡಂತೆ ಈ ಬಾರಿಯೂ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಕಾಮಗಾರಿಯನ್ನು ಕೈಗೊಳ್ಳೋಣ ಎಂದು ಸಲಹೆ ನೀಡಿದರು.ಬಂಡೆ ಕಪಿಲೆ ಓಬಣ್ಣ ಮಾತನಾಡಿ, ಪ್ರತಿಯೊಂದು ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಕರೆಯಿಸಿ ಮತ್ತೊಮ್ಮೆ ಪೂರ್ವಭಾವಿ ಸಭೆ ನಡೆಸೋಣ. ನಮ್ಮಲ್ಲಿ ಅನುದಾನ ಕೊರತೆ ಇರುವುದರಿಂದ ಸಮಾಜದ ಸರ್ಕಾರಿ ನೌಕರರ ಅವಶ್ಯಕತೆ ಬೇಕಾಗಿರುತ್ತದೆ ಎಂದರು.ಕರ್ನಾಟಕ ರಕ್ಷಣ ವೇದಿಕೆಯ ಹೋಬಳಿ ಅಧ್ಯಕ್ಷ ಮುತ್ತಯ್ಯ ಮಾತನಾಡಿ, ನಮ್ಮ ಸಂಘ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೋ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದರು. ಎನ್. ಮಹದೇವಪುರ ಗ್ರಾಪಂ ಮಾಜಿ ಅಧ್ಯಕ್ಷ ಬೋರನಾಯಕ, ಮಲ್ಲೂರಹಳ್ಳಿ ಗ್ರಾಪಂ ಸದಸ್ಯ ಕಾಟಯ್ಯ, ಕೆ.ಟಿ. ನಾಗರಾಜ, ನಿವೃತ್ತ ಪಶು ವೈದ್ಯ ಡಾ. ತಿಪ್ಪೇಸ್ವಾಮಿ, ಗುಂತಕೋಲಮ್ಮನಹಳ್ಳಿ ಗ್ರಾಪಂ ಉಪಾಧ್ಯಕ್ಷ ಜಯಣ್ಣ, ಬೋರಸ್ವಾಮಿ, ಮೇಘ ಹೊಟೇಲ್ ಬಸವರಾಜ್, ಕೆ.ಓ ರಾಜಯ್ಯ, ಹಟ್ಟಿ ಮಲ್ಲಪ್ಪನಾಯಕ ಸಂಘದ ಉಪಾಧ್ಯಕ್ಷರು, ಸರ್ವ ಸದಸ್ಯರು, ವಾಲ್ಮೀಕಿ ಸಮಾಜದ ಮುಖಂಡರು, ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷರು, ಸದಸ್ಯರು ಇದ್ದರು.