ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಹದಿಹರೆಯದ ಮಕ್ಕಳು ಕುತೂಹಲದಿಂದ ತಂಬಾಕು ಸೇವನೆ ಕಡೆ ಮುಖ ಮಾಡುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಚಿಕತ್ಸೆ ನೀಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳ ರಕ್ಷಿಸಿ ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಉಜ್ವಲ ವೀರಣ್ಣ ಸಿದಣ್ಣವರ್ ಹೇಳಿದರು.ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ, ಆಯೋಜಿಸಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಗಳು ತಂಬಾಕು ಸೇವನೆಯಿಂದಾಗುವ ಪರಿಣಾಮಗಳನ್ನು ಹೇಳಿದರೆ ವ್ಯಸನಿಗಳು ಕೇಳುವುದಿಲ್ಲ. ವೈದ್ಯರು ಹೇಳಿದರೆ ಕೇಳುತ್ತಾರೆ. ಇಂದು ವಿದ್ಯಾರ್ಥಿಗಳಾಗಿರುವ ನೀವು ಮುಂದೆ ವೈದ್ಯರಾಗಿ ರೋಗಿಗಳ ಸೇವೆ ಮಾಡುವಿರಿ. ಈ ಹಿನ್ನೆಲೆಯಲ್ಲಿ ಆರ್ಯುವೇದ ಕಾಲೇಜಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತಂಬಾಕು, ಲಿಕ್ಕರ್, ಸಿಗರೇಟ್ ಸೇವನೆ ಮಾಡುವುದರಿಂದ ಆರೋಗ್ಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವುಗಳ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಈ ಬಗ್ಗೆ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಗಳ ಸಹಿತ ಬಿತ್ತರಿಸಿದರೂ, ಸೇವನೆ ಮಾಡುತ್ತಿರುವುದು ದುರಂತ ಎಂದರು.ಚಲನಚಿತ್ರಗಳ ಪರಿಣಾಮಗಳಿಂದ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಮಕ್ಕಳು ತಂಬಾಕು, ಗಾಂಜಾ ಸೇವನೆ ಮಾಡಿ ಕಾನೂನು ಸಂಘರ್ಷಕ್ಕೆ ಸಿಲುಕುತ್ತಾರೆ. ಇವರನ್ನು ರಕ್ಷಿಸುವುದೇ ಈ ಬಾರಿಯ ವಿಶ್ವ ತಂಬಾಕು ರಹಿತ ದಿನದ ಘೋಷ ವಾಕ್ಯ ವಾಗಿದೆ. ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸೋಣ ಎಂದರು.
ಜಿಲ್ಲಾಸ್ಪತ್ರೆಯ ದಂತ ವೈದ್ಯಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಾಢವಾದ ಪರಿಣಾಮ ಬೀರುತ್ತದೆ. ತಂಬಾಕು ಸೇವನೆ ಸಾಮಾಜಿಕ ಪಿಡುಗು ಎಂದರೆ ತಪ್ಪಾಗಲಾರದು. ತಂಬಾಕು ಹಾಗೂ ಇತರೆ ಗುಟ್ಕಾ ಸೇವನೆ ಕ್ರಮೇಣ ಚಟವಾಗಿ ಮಾರ್ಪಟ್ಟು, ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗಬಹುದು. ತಂಬಾಕು ಸೇವನೆಗಳ ಬಗ್ಗೆ ಇನ್ನೂ ಹೆಚ್ಚಿನ ಅರಿವು ಹೊಂದಬೇಕು.ದುಶ್ಚಟಗಳಿಂದ ದೂರವಾಗಿಸಲು ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಸಮುದಾಯಗಳಲ್ಲಿ ನಿಕೋಟಿನ್ ವ್ಯಸನದಿಂದ ಮುಕ್ತರಾಗಲು ಔಷದ ನೀಡಲಾಗುತ್ತದೆ. ಇದನ್ನು ಸೇವನೆ ಮಾಡಿದರೆ ಕಾಲ ಕ್ರಮೇಣ ದುಶ್ಚಟಗಳಿಂದ ಹೊರಬರಬಹುದಾಗಿದೆ. ಜಿಲ್ಲೆಯು ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ. ಅನಿಲ್ ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಎಂ.ಎಸ್.ಪ್ರಶಾಂತ್ ಹಾಗೂ ಆಸ್ಪತ್ರೆಯ ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.ತಂಬಾಕಿನಿಂದ ವಾರ್ಷಿಕ 10 ಲಕ್ಷ ಜನರಿಗೆ ಜೀವ ಹಾನಿ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ಚಿತ್ರದುರ್ಗ: ವಿಶ್ವದಾದ್ಯಂತ ಪ್ರತಿವರ್ಷ ತಂಬಾಕು ಉತ್ಪನ್ನಗಳ ನೇರ ಸೇವನೆಯಿಂದ 10 ಲಕ್ಷ ಜನರು ಮೃತರಾದರೆ, ಪರೋಕ್ಷ ಸೇವನೆಯಿಂದ ಸುಮಾರು₹ 2 ಲಕ್ಷದಷ್ಟು ಜನರ ಜೀವಹಾನಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್‍ರವರು ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆಎಂ ಪದವಿ ಕಾಲೇಜಿನಲ್ಲಿ ಎಸ್.ಜೆಎಂ ದಂತ ಮಹಾವಿದ್ಯಾಲಯ, ಯೂತ್ ರೆಡ್‍ಕ್ರಾಸ್ ಯುನಿಟ್, ಎಒಎಂಎಸ್‍ಐ, ಕೆಎಒಎಂಎಸ್‍ಐ, ಚಿತ್ರದುರ್ಗ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಂಬಾಕು, ಬೀಡಿ-ಸಿಗರೇಟು, ಇ-ಸಿಗರೇಟ್ ಇನ್ನಿತರೆ ತಂಬಾಕು ಪದಾರ್ಥಗಳು ವಾತಾವರಣವನ್ನು ಕಲುಷಿತಗೊಳಿಸುವುದಲ್ಲದೆ ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಯುವಜನತೆ, ವಿದ್ಯಾರ್ಥಿಗಳು, ಅನಕ್ಷರಸ್ಥರು, ದುಡಿಯುವ ವರ್ಗದವರು ದುಶ್ಚಟಗಳ ಬಗ್ಗೆ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳುವುದರತ್ತ ಗಮನಹರಿಸುವಂತೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಹೆಚ್ ಪಂಚಾಕ್ಷರಿ ಮಾತನಾಡಿ, ತಂಬಾಕು ಮತ್ತು ತಂಬಾಕಿನ ಉಪಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆಯಿರುತ್ತದೆ. ಇವು ಯುವಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರವಹಿಸಬೇಕೆಂದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗಾಯತ್ರಿ ಶಿವರಾಂ ರೆಡ್‍ಕ್ರಾಸ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ಡಾ.ಆರ್ ಗೌರಮ್ಮ ,ಇಂಡಿಯನ್ ಡೆಂಟಲ್ ಅಸೋಸಿಯೇಷನ್‍ನ ಖಜಾಂಚಿ ಡಾ.ಪ್ರಣೀತ, ಎಸ್.ಜೆಎಂ ದಂತ ಮಹಾವಿದ್ಯಾಲಯದ ಡಾ.ಸುನೀಲ್ ವಿ. ವಡವಡಗಿ, ಡಾ.ಗಝಲ ಯಾಸ್ಮಿನ್, ಡಾ.ಭೂಮಿಕ, ಎಸ್.ಜೆಎಂ ಕಾಲೇಜಿನ ಐಕ್ಯುಎಸಿ ಕೋಆರ್ಡಿನೇಟರ್ ಡಾ.ಹರ್ಷವರ್ಧನ್, ರೆಡ್‍ಕ್ರಾಸ್ ಸೊಸೈಟಿಯ ನಿರ್ದೇಶಕ ಶಿವರಾಮ್ ವೇದಿಕೆಯಲ್ಲಿದ್ದರು. ಪ್ರೊ.ಡಿ ನಾಗರಾಜಪ್ಪ ಪ್ರತಿಜ್ಞಾವಿಧಿ ಬೋಧಿಸಿದರು.ಪ್ರಾಧ್ಯಾಪಕರುಗಳಾದ ಪ್ರೊ.ಎಲ್.ಶ್ರೀನಿವಾಸ್, ಪ್ರೊ.ಹೆಚ್.ಎಂ ಮಂಜುನಾಥ ಸ್ವಾಮಿ, ಡಾ.ಬಿ ರೇವಣ್ಣ ಹಾಗೂ ಬೋಧಕೇತರರು ಭಾಗವಹಿಸಿದ್ದರು. ಡಾ.ಸತೀಶ್ ನಾಯ್ಕ್ ಸ್ವಾಗತಿಸಿದರು. ಪ್ರೊ.ಟಿ.ಎನ್ ರಜಪೂತ್ ವಂದಿಸಿದರು. ಡಾ. ಎಸ್.ನಾಜೀರುನ್ನೀಸ ನಿರೂಪಿಸಿದರು.