ಮೈಷುಗರ್ ಆಸ್ತಿ ರಕ್ಷಿಸಿ, ಹೊಸ ಕಾರ್ಖಾನೆ ನಿರ್ಮಿಸಿ: ರೈತರ ಒತ್ತಾಯ

KannadaprabhaNewsNetwork | Published : Feb 24, 2024 2:36 AM

ಸಾರಾಂಶ

ಮೈಷುಗರ್ ಕಾರ್ಖಾನೆ ಆಸ್ತಿಯನ್ನು ಸಂರಕ್ಷಿಸಿಕೊಂಡು ಹೊಸ ಕಾರ್ಖಾನೆ ನಿರ್ಮಿಸುವುದಕ್ಕೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ. ಆಸ್ತಿ ಸಂಬಂಧ ಯಾವುದೇ ಒಪ್ಪಂದ ಮಾಡಿಕೊಳ್ಳುವುದಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯಮೈಷುಗರ್ ಕಾರ್ಖಾನೆ ಆಸ್ತಿಯನ್ನು ಸಂರಕ್ಷಿಸಿಕೊಂಡು ಹೊಸ ಕಾರ್ಖಾನೆ ನಿರ್ಮಿಸುವುದಕ್ಕೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ. ಆಸ್ತಿ ಸಂಬಂಧ ಯಾವುದೇ ಒಪ್ಪಂದ ಮಾಡಿಕೊಳ್ಳುವುದಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ), ನಾವು ದ್ರಾವಿಡ ಕನ್ನಡಿಗರು ಚಳವಳಿ, ಜಯಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಈಗಿರುವ ಕಾರ್ಖಾನೆ ಜಾಗದಲ್ಲೇ ಹೊಸ ಮಿಲ್ ನಿರ್ಮಿಸಿದರೆ ನಿತ್ಯ ೧೦ ಸಾವಿರ ಟನ್ ಕಬ್ಬು ಅರೆಯಬಹುದು. ಸಹ ವಿದ್ಯುತ್ ಘಟಕ, ಎಥೆನಾಲ್, ಮದ್ಯಸರ ಘಟಕಗಳು ಆರಂಭವಾಗಿ ಕಾರ್ಖಾನೆಗೆ ಆಧುನಿಕ ಸ್ಪರ್ಶ ದೊರಕಿದರೆ ಕಂಪನಿಯನ್ನು ಪ್ರಗತಿದಾಯಕವಾಗಿ ಮುನ್ನಡೆಸಬಹುದು ಎಂದು ಹೇಳಿದರು.

ಹೊಸ ಕಾರ್ಖಾನೆ ನಿರ್ಮಿಸುವ ಸಲುವಾಗಿ ಮೈಷುಗರ್ ಆಸ್ತಿಯನ್ನು ಖಾಸಗಿಯವರಿಗೆ ಒತ್ತೆ ಇಡಲಾಗುವುದೆಂಬ ಮಾತುಗಳು ಕೇಳಿಬರುತ್ತಿರುವುದರಿಂದ ಈ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು. ಮೈಷುಗರ್ ಕಾರ್ಖಾನೆ ಆಸ್ತಿ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಈ ವಿಷಯವಾಗಿ ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳದಂತೆ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಆನ್‌ಲೈನ್‌ನಲ್ಲಿ ಮೈಷುಗರ್ ಸಾಮಾನ್ಯ ಸಭೆ ನಡೆಸುವುದು ಬೇಡ. ಕಳೆದ ಬಾರಿ ರೈತರು ಮತ್ತು ಷೇರುದಾರರು ಸೇರಿದಂತೆ ಎಲ್ಲರೂ ವಿರೋಧ ಮಾಡಿದ್ದರು. ಈಗಲೂ ಸಹ ವಿರೋಧವಿದೆ, ವಾರ್ಷಿಕ ಸಭೆ ಆನ್‌ಲೈನ್‌ನಲ್ಲಿ ನಡೆಯದೆ ಕಾರ್ಖಾನೆ ಆವರಣದಲ್ಲಿಯೇ ನಡೆಯಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ಬರಗಾಲ ಎದುರಾಗಿರುವುದರಿಂದ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಸಾಂಧ್ರತೆ ಕಡಿಮೆಯಾಗಿದೆ. ಆದಕಾರಣ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತೆಲೆದೋರಿದೆ, ಬೆಳೆ ಪರಿಹಾರದ ಹಣವೂ ಶೀಘ್ರದಲ್ಲಿಯೇ ತಲುಪುವಂತೆ ಮಾಡಬೇಕು. ಈಗ ಲಭ್ಯವಿರುವ ನೀರನ್ನು ಕುಡಿಯುವ ನೀರಿಗೆ ಉಳಿಸಿಕೊಂಡು, ಒಂದು ಬೆಳೆಯನ್ನಾದರೂ ಬೆಳೆಯಲು ನೀರು ಹರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಯ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಹನಕೆರೆ ಅಭಿ, ಗುರುಪ್ರಸಾದ್ ಕೆರಗೋಡು, ಶಂಭೂನಹಳ್ಳಿ ಕೃಷ್ಣ, ಸಾತನೂರು ವೇಣುಗೋಪಾಲ್, ಎಸ್.ನಾರಾಯಣ್, ಹುಲ್ಕೆರೆ ಮಹದೇವು, ಎಂಎಲ್.ತುಳಸೀಧರ್, ಪಣಕನಹಳ್ಳಿ ಬೋರಲಿಂಗೇಗೌಡ, ಕೀಲಾರ ಸೋಮಶೇಖರ್, ಎಂ.ವಿ.ಕೃಷ್ಣ, ಮುದ್ದೇಗೌಡ ಭಾಗವಹಿಸಿದ್ದರು.

Share this article