ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ

KannadaprabhaNewsNetwork |  
Published : Sep 22, 2024, 01:48 AM IST
ಗಜೇಂದ್ರಗಡ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡುವಂತೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿಗೆ ಬೀದಿ ಬದಿ ವ್ಯಾಪಾರಿಗಳು ಮನವಿ ನೀಡಿದರು. | Kannada Prabha

ಸಾರಾಂಶ

ಬೀದಿ ಬದಿ ವ್ಯಾಪಾರಸ್ಥರು ನೀಡಿದ ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆ ಕುರಿತು ಶಾಸಕ ಜಿ.ಎಸ್. ಪಾಟೀಲ ಹಾಗೂ ಸದಸ್ಯರೊಂದಿಗೆ ಚರ್ಚಿಸಲಾಗುವುದು

ಗಜೇಂದ್ರಗಡ: ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಯಲು ಪುರಸಭೆ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ಶನಿವಾರ ಇಲ್ಲಿನ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿಗೆ ಮನವಿ ನೀಡಿದರು.

ಸ್ಥಳೀಯ ಪ್ರಮುಖ ರಸ್ತೆ ಹಾಗೂ ವೃತ್ತಗಳ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ರೋಣ ರಸ್ತೆಯ ಎಪಿಎಂಸಿ ಎದುರಿನ ಬಯಲು ಜಾಗೆಗೆ ಸ್ಥಳಾಂತರಿಸಿದ್ದು ಖಂಡನಾರ್ಹ. ಪುರಸಭೆಯಿಂದ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ನಮಗೆ ಗುರುತಿನ ಚೀಟಿ ನೀಡಿದ್ದೀರಿ ಹೊರತು ನಮ್ಮ ಹಿತ ಕಾಯುತ್ತಿಲ್ಲ. ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಸಹ ಇಲ್ಲದ ಪರಿಣಾಮ ಕುಡಿಯಲು ಹನಿ ನೀರಿಲ್ಲ. ಮಳೆ ಹಾಗೂ ಸುಡಿ ಬಿಸಲಿನಲ್ಲಿ ಮಹಿಳೆಯರು, ವೃದ್ಧರು ವ್ಯಾಪಾರ ವಹಿವಾಟ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಮೊದಲು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರೊಂದಿಗೆ ಚರ್ಚಿಸಬೇಕಿತ್ತು. ಅಲ್ಲದೆ ನಮ್ಮನ್ನು ಸ್ಥಳಾಂತರಿಸಲು ಯಾವುದೇ ಠರಾವು ಅಥವಾ ನೋಟಿಸ್ ನೀಡಿಲ್ಲ ಎಂದ ದೂರಿದ ಬೀದಿ ಬದಿ ವ್ಯಾಪಾರಸ್ಥರು, ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ವಹಿವಾಟನ್ನು ನೆಚ್ಚಿಕೊಂಡು ಈಗಾಗಲೇ ಅನೇಕ ಸ್ವ-ಸಹಾಯ ಗುಂಪು ಮತ್ತು ಪೈನಾನ್ಸ್‌ಗಳಲ್ಲಿ ಸಾಲ ತಗೆದುಕೊಂಡಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಅಧಿಕಾರಿಗಳ ನಡೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಪಟ್ಟಣದ ಜೋಡು ರಸ್ತೆ ಸೇರಿ ಪ್ರಮುಖ ರಸ್ತೆ ಮತ್ತು ವೃತ್ತಗಳ ಅಕ್ಕಪಕ್ಕದಲ್ಲಿ ಹಿಂದಿನಂತೆ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಬೇಕು. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆ ಮಾಡುವ ವ್ಯಾಪಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಬೀದಿ ಬದಿ ವ್ಯಾಪಾರಸ್ಥರು ನೀಡಿದ ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆ ಕುರಿತು ಶಾಸಕ ಜಿ.ಎಸ್. ಪಾಟೀಲ ಹಾಗೂ ಸದಸ್ಯರೊಂದಿಗೆ ಚರ್ಚಿಸಲಾಗುವುದು ಎಂದರು.

ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಭಾಷೇಸಾಬ ಕರ್ನಾಚಿ, ಹುಲ್ಲಪ್ಪ ತಳವಾರ, ಮಂಜುಳಾ ಪಮ್ಮಾರ, ಮುತ್ತು ರಾಠೋಡ, ಕಾಶಪ್ಪ ಭಜಂತ್ರಿ, ಮಲ್ಲವ್ವ ರಾಠೋಡ, ಸತೀಶ ಜುಂಜಾ, ಲಲಿತಾ ಮಾಳೊತ್ತರ, ಲಕ್ಷ್ಮವ್ವ ವಡ್ಡರ, ಶಂಕ್ರರಪ್ಪ ರಾಠೋಡ, ಪರಶುರಾಮ ಬಡಿಗೇರ ಸೇರಿ ಇತರರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ