ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಎಚ್.ಶಶಿಧರ್ ಶೆಟ್ಟಿ

KannadaprabhaNewsNetwork |  
Published : Sep 27, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಅಥವಾ ಇಲಾಖೆಗಳ ಹೊಣೆ ಮಾತ್ರವಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಹೇಳಿದರು.

ಮಕ್ಕಳ ಹಕ್ಕುಗಳು, ಪೋಕ್ಸೋ, ಬಾಲ-ಕಿಶೋರ, ಕಾರ್ಮಿಕ ಕಾಯ್ದೆ ಕುರಿತ ಕಾನೂನು ಅರಿವು,ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಅಥವಾ ಇಲಾಖೆಗಳ ಹೊಣೆ ಮಾತ್ರವಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ ಕಾಯ್ದೆ ಕುರಿತು ಕಾನೂನು ಅರಿವು ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಸುಮಾರು 24 ಲಕ್ಷ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದು, ಕಾನೂನು ಅರಿವು ಪ್ರತಿಯೊಬ್ಬರಿಗೂ ಅಗತ್ಯ. ದುರ್ಬಲ ಹಾಗೂ ಶೋಷಿತ ವರ್ಗದವರಿಗೆ ಉಚಿತ ಕಾನೂನು ನೆರವು ನೀಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶ ಎಂದರು.ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿದೆ. ಆದರೆ ಮಕ್ಕಳು ಹೋಟೆಲ್, ಕಾಫಿ ತೋಟ, ಪಟಾಕಿ ಕಾರ್ಖಾನೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಾಲಕಾರ್ಮಿಕರಾಗಿ ತೊಡಗಿರುವುದು ಕಂಡುಬರುತ್ತಿದೆ. ಇಂತಹ ಪ್ರಕರಣ ಕಂಡು ಬಂದರೆ 1098 ಚೈಲ್ಡ್ ಹೆಲ್ಪ್‌ಲೈನ್‌ಗೆ ಮಾಹಿತಿ ನೀಡಬೇಕು. ಮಕ್ಕಳನ್ನು ಕೆಲಸದಿಂದ ಬಿಡಿಸುವುದಷ್ಟೇ ಅಲ್ಲದೆ, ಕುಟುಂಬದ ಆರ್ಥಿಕ ಸಮಸ್ಯೆ ಗುರುತಿಸಿ ಸರ್ಕಾರಿ ಯೋಜನೆಗಳ ಮೂಲಕ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.ರಾಜ್ಯದಲ್ಲಿ 9 ಸಾವಿರಕ್ಕೂ ಅಧಿಕ ಪೋಕ್ಸೋ ಪ್ರಕರಣಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 200ಕ್ಕೂ ಅಧಿಕ ಪ್ರಕರಣಗಳಿವೆ. ಪೋಕ್ಸೋ ಕಾಯ್ದೆ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ. ಗಂಡುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ವರದಿ ಯಾಗುತ್ತಿವೆ. ಇಂತಹ ಪ್ರಕರಣ ಮುಚ್ಚಿಡದೆ ಕಾನೂನಿನ ಪ್ರಕಾರ ವರದಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಮಕ್ಕಳು ಸ್ವಂತ ಮನೆಯಲ್ಲೇ ದೌರ್ಜನ್ಯಕ್ಕೆ ಒಳಗಾಗುತ್ತಿರುವುದೂ ಆತಂಕಕಾರಿ. ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಶಿಕ್ಷಕರು ಪ್ರೀತಿಯಿಂದ ವಿಚಾರಿಸಿ ಧೈರ್ಯ ತುಂಬಬೇಕು. ಶಾಲೆಗಳಲ್ಲಿ ಉತ್ತಮ ಸ್ಪರ್ಶ–ಕೆಟ್ಟ ಸ್ಪರ್ಶ ಹಾಗೂ ಸೈಬರ್ ಭದ್ರತೆ ಕುರಿತು ನಿರಂತರ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಹಲವು ಪ್ರಕರಣಗಳಿಗೆ ಬಾಲ್ಯವಿವಾಹವೂ ಕಾರಣವಾಗುತ್ತಿದೆ. ಬಾಲ್ಯವಿವಾಹದ ಮಾಹಿತಿ ದೊರೆತರೆ ತಕ್ಷಣ 1098ಕ್ಕೆ ಕರೆ ಮಾಡಬೇಕು. 18 ವರ್ಷದೊಳಗಿನ ಬಾಲಕಿ ಗರ್ಭಿಣಿಯಾಗಿ ಆಸ್ಪತ್ರೆಗೆ ಬಂದರೂ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದರೂ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯ. ಮಾಹಿತಿ ಮುಚ್ಚಿ ಟ್ಟರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಜಿಲ್ಲಾ ನ್ಯಾಯಾಧೀಶ ರವೀಂದ್ರ ಹೆಗಡೆ ಮಾತನಾಡಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸಮಾಜದ ಪ್ರತಿಯೊಬ್ಬರೂ ಸಾಮಾಜಿಕ ಹೊಣೆಗಾರಿಕೆ ವಹಿಸಬೇಕು ಎಂದರು. ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ಸೂಕ್ತ ಆದಾಯ ದೊರೆತಾಗ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಶಾಲೆಗೆ ಕಳುಹಿಸಲು ಸಾಧ್ಯ ವಾಗುತ್ತದೆ. ಬಾಲಕಾರ್ಮಿಕ ನಿಷೇಧ ಸೇರಿದಂತೆ ಎಲ್ಲ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯ ಎಂದರು.ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ರಾಷ್ಟ್ರೀಯ ಯೋಜನೆ ಸಂಯೋಜಕ ರಂಜಿತ್ ಪ್ರಕಾಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಬಾಲ ಸುಬ್ರಹ್ಮಣ್ಯಂ, ಬಿ.ಬಿನು, ಜಯಶೀಲಾ ಕೆ.ಆರ್., ಮಾಲತಿ ಬಿ., ಸುಭಾಷ್ ಎಂ. ಆಲದಕಟ್ಟಿ, ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಲೈಮಾಕ್ಸ್ ತಲುಪಿದ ಸಿಟಿ ಇನ್‌ಸ್ಟಿಟ್ಯೂಟ್ ಸಭೆ
ರಾಣೀಕೆರೆ ಒತ್ತುವರಿ ಸರ್ವೆ ಕಾರ್ಯಕ್ಕೆ ಗ್ರಹಣ