ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1924ರ ಇಸ್ವಿಯಲ್ಲಿ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿವೇಶನ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ ಅಧ್ಯಕ್ಷರಾದರು. ಅಧಿವೇಶ ನಡೆದು ಒಂದು ಶತಮಾನವಾದ ಹಿನ್ನೆಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಎಲ್ಲಾ ಸಿದ್ಧತೆ ನಡೆದಿದ್ದು, ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳೆದ ನಾಲ್ಕೈದು ದಿನಗಳಿಂದ ಇಲ್ಲೇ ಇದ್ದು ಅಚ್ಚುಕಟ್ಟಾಗಿ ಸಿದ್ಧತೆ ಕೈಗೊಂಡಿದ್ದಾರೆ. ನಾಳೆಯೂ ಸಮಾವೇಶ ಯಶಸ್ವಿಯಾಗಿ ನಡೆಯಲಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನ ಸೇರಲಿದ್ದಾರೆ. ಬೆಳಗಾವಿಯಲ್ಲಿ ಇದು ಐತಿಹಾಸಿಕ ಸಮಾವೇಶವಾಗಲಿದೆ ಎಂದರು.ಬೆಳಗಾವಿಗೆ ವಿಶೇಷ ಕೊಡುಗೆ ನೀಡುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಇದು ಬೆಳಗಾವಿಗೆ ಕೊಡುಗೆ ಘೋಷಣೆ ಮಾಡುವ ಸಮಾವೇಶ ಅಲ್ಲ. ನೂರು ವರ್ಷಗಳ ಹಿಂದೆ ನಡೆದಿದ್ದ ಅಧಿವೇಶನದ ಜ್ಞಾಪಕಾರ್ಥವಾಗಿ ನಡೆಯುತ್ತಿರುವ ಕಾರ್ಯಕ್ರಮ ಎಂದರು. ಬೆಳಗಾವಿಯಲ್ಲಿ ಒಂದು ಗಂಟೆಗೆ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ನಡೆಯಲಿದ್ದು, ಈ ಸಮಾವೇಶ ಡಿಸೆಂಬರ್ 27ರಂದು ನಡೆಯಬೇಕಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು ಎಂದು ವಿವರಿಸಿದರು.ಪ್ರಹ್ಲಾದ್ ಜೋಶಿಗೆ ಇತಿಹಾಸದ ಬಗ್ಗೆ ತಿಳಿದಿಲ್ಲ:
ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು, ಅಧಿವೇಶನ ನಡೆಸಲು ಹಕ್ಕಿಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರಹ್ಲಾದ್ ಜೋಶಿ ಅವರಿಗೆ ಇತಿಹಾಸ ಗೊತ್ತಿಲ್ಲ. ಗೋಲ್ವಾಲ್ಕರ್ ಹಾಗೂ ಸಾವರ್ಕರ್ ಸಂವಿಧಾನ ಜಾರಿಯಾದಾಗ ಏನು ಮಾತನಾಡಿದ್ದರು ಎಂಬುದು ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಅವರು, ಸಮಾವೇಶವನ್ನು ಪಕ್ಷದ ವತಿಯಿಂದ ಕೈಗೊಂಡಿದ್ದು, ಪ್ರತಿಮೆ ಅನಾವರಣವನ್ನು ಸರ್ಕಾರ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.ಯತ್ನಾಳ್ ಇತಿಹಾಸ ಓದಿಕೊಂಡಿಲ್ಲ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗೋಡ್ಸೆ ಹತ್ಯೆಯಲ್ಲಿ ನೆಹರೂ ಅವರ ಪಾತ್ರವಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಇತಿಹಾಸ ತಿಳಿದಿಲ್ಲ. ಅದನ್ನು ಓದಿಯೂ ಇಲ್ಲ ಎಂದ ಅವರು, ಅದಕ್ಕಾಗಿಯೇ ಅಂಬೇಡ್ಕರ್ ಅವರು ಇತಿಹಾಸ ಗೊತ್ತಿಲ್ಲದವರು ಭವಿಷ್ಯವನ್ನು ಸೃಷ್ಟಿಸಲಾರರು ಎಂದು ಹೇಳಿದ್ದರು. ಮಹಾತ್ಮ ಗಾಂಧಿ ಅವರನ್ನು ಗೋಡ್ಸೆ ಕೊಂದಿದ್ದು, ಆತನ ಜೊತೆ ಸಾವರ್ಕರ್ ಕೂಡ ಶಾಮೀಲಾಗಿರುವ ಬಗ್ಗೆ ಪ್ರಕರಣವಿತ್ತು ಎಂದು ತಿಳಿಸಿದರು.