ಕೊಟ್ಟೂರು: ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಕಲಿಕೆಗೆ ಅವಶ್ಯವಿರುವ ಸೂಕ್ತ ವಾತಾವರಣ ರೂಪಿಸದ ಕಾರಣ ನಮ್ಮ ಅರಿವಿಗೆ ಇಲ್ಲದೇ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿವೆ ಎಂದು ಹಂಪಿಯ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧಕ ಹಾಗೂ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಎಚ್.ಸಿ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಸ್ಥಳೀಯ ಯುನಿಕ್ ಚಾರಿಟಬಲ್ ಟ್ರಸ್ಟ್ ಸಹಯೋಜಗದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳಿಂದ ಮಕ್ಕಳ ರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.೧೮ ವರ್ಷದೊಳಗಿನ ಬಾಲಕ ಬಾಲಕಿಯರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತಿದೆ. ಮಕ್ಕಳ ಅಭಿಪ್ರಾಯ, ಆಸಕ್ತಿ, ಅಭಿರುಚಿಗಳನ್ನು ಪೋಷಕರು ತಿಳಿಯುವುದು ಮುಖ್ಯ. ಮಕ್ಕಳ ಭಾಗವಹಿಸುವಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಮಾನತೆ ಹಕ್ಕು ನೀಡಬೇಕು. ಮಕ್ಕಳ ರಕ್ಷಣೆಗಾಗಿ ಸರ್ಕಾರ ಜಾರಿ ಮಾಡಿರುವ ಕಾನೂನು ನಿಯಮಗಳಿಂದ ನಮ್ಮ ಮಕ್ಕಳನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ತಿಳಿಯಬಹುದಾಗಿದೆ. ಅವುಗಳನ್ನು ಪ್ರತಿಯೊಬ್ಬರೂ ಅದರಲ್ಲೂ ಶಿಕ್ಷಣ ಸಂಸ್ಥೆಯವರು ತಿಳಿದು ಮಕ್ಕಳ ಹಕ್ಕುಗಳಿಂದ ರಕ್ಷಿಸಬೇಕು ಎಂದು ಹೇಳಿದರು.
ಬಳ್ಳಾರಿ ವಿಎಸ್‌ಕೆಡಿ ವಿವಿಯ ಸಮಾಜ ಕಾರ್ಯ ವಿಭಾಗದ ಸಂಶೋಧಕ ಎಂ.ಬೊಮಣ್ಣ ಮಾತನಾಡಿ, ಕಾನೂನು ಎಷ್ಟೇ ಕಠಿಣವಾಗಿದ್ದರೂ ಇಂದಿಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ವಿಷಾದನೀಯ. ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಬಾಲ್ಯ ವಿವಾಹ ನಡೆಯುತ್ತಿದ್ದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಯೂನಿಕ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಎಂ. ಈಶ್ವರಯ್ಯ, ಬಿಇಒ ಪದ್ಮನಾಭ ಕರಣಂ, ಮುಖ್ಯಗುರು ಎಸ್.ಎ.ಬಸವರಾಜ, ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ರುದ್ರೇಶ ಮಾತನಾಡಿದರು. ಟ್ರಸ್ಟ್ ಸದಸ್ಯ ಮಂಜುನಾಥ ಮೋರಗೇರಿ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಎಸ್.ಸುರೇಶ ನಿರ್ವಹಿಸಿದರು.