ಕನ್ನಡಪ್ರಭ ವಾರ್ತೆ ಮಂಗಳೂರು
ದೇಶ ಭಕ್ತಿ, ದೇವಭಕ್ತಿ ಎಲ್ಲಿರುತ್ತದೋ ಅಲ್ಲಿ ಸಂಸ್ಕೃತಿ ಬೆಳೆಯುತ್ತದೆ. ಯಾವುದೇ ಅಮಿಷ, ಷಡ್ಯಂತರಕ್ಕೆ ಬಲಿಯಾಗದೆ ಹಿಂದೂ ಧರ್ಮ ಹಾಗೂ ಸಂಸ್ಕೃತಿ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್ ನಿರಂತರ ಶ್ರಮಿಸುತ್ತಿರುವುದು ವಿಶೇಷ ಎಂದು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಸುರತ್ಕಲ್ ಪ್ರಖಂಡ ವಿಶ್ವ ಹಿಂದೂ ಪರಿಷತ್ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಭಾನುವಾರ ಸುರತ್ಕಲ್ ಕರ್ನಾಟಕ ಸೇವಾ ವೃಂದ ವೇದಿಕೆಯಲ್ಲಿ ಷಷ್ಟ್ಯಬ್ದಿ ಆಚರಣೆ ಹಾಗೂ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಈ ಹಿಂದೆ ಶ್ರೀ ಕೃಷ್ಣ ಪರಮಾತ್ಮನು ಅಸುರರನ್ನು, ಸಮಾಜಕ್ಕೆ ಕಂಟಕರಾದವರನ್ನು ಸಂಹರಿಸಿ ಧರ್ಮ ರಕ್ಷಣೆ ಮಾಡಿದ್ದಾನೆ. ಇಂದು ಕೃಷ್ಣಾಷ್ಟಮಿಯಂದು ಹುಟ್ಟು ಪಡೆದ ವಿಶ್ವ ಹಿಂದೂ ಪರಿಷತ್ ಧರ್ಮ ರಕ್ಷಣೆ, ಗೋ ರಕ್ಷಣೆ, ನಮ್ಮ ಹಿಂದೂ ಸಂಸ್ಕೃತಿ ರಕ್ಷಣೆಯ ಹೋರಾಟದಲ್ಲಿ ತೊಡಗಿಸಿಕೊಂಡು ಧರ್ಮ ಸೇವೆಯನ್ನು ಮಾಡುತ್ತಿದೆ ಎಂದರು.ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಅನೇಕ ಸಂಕಷ್ಟಗಳ ನಡುವೆಯೂ ಮತಾಂತರ, ಗೋ ವಧೆ, ಹಿಂದೂ ಯುವತಿಯರ ಮತಾಂತರ ಇತ್ಯಾದಿ ಅನಾಚಾರಗಳ ವಿರುದ್ಧ ಹಿಂದೂ ಸಮಾಜದ ಉತ್ತಮವಾದ ಧ್ಯೇಯಕ್ಕಾಗಿ 60 ವರ್ಷಗಳಲ್ಲಿ ಒಂದೇ ಗುರಿಯೊಂದಿಗೆ ಹೋರಾಡುತ್ತಿದ್ದು, ಅವರಿಗೆ ಒಳಿತಾಗಲಿ ಎಂದು ಹಾರೈಸಿದರು.ವಿಹಿಂಪ ವಿಭಾಗೀಯ ಸಹ ಸಂಚಾಲಕ ಶಿವಾನಂದ ಮೆಂಡನ್ ದಿಕ್ಸೂಚಿ ಭಾಷಣ ಮಾಡಿ, ಕಳೆದ 60 ವರ್ಷಗಳ ಹಿಂದೆ ಪೂಜ್ಯ ಸಾಧು ಸಂತರ ಆಶೀರ್ವಾದದಿಂದ ಆರಂಭವಾದ ಬಳಿಕ ದೇಶದಲ್ಲಿ ಹಿಂದೂ ಸಮಾಜದ ಒಳಿತಾಗಿ ಹೋರಾಡುತ್ತಲೇ ಬಂದಿದೆ. ಷಷ್ಟ್ಯಬ್ದ ಪೂರ್ತಿ ಪ್ರಯುಕ್ತ ಏಕಕಾಲದಲ್ಲಿ ಹಲವು ಭಾಗಗಳಲ್ಲಿ ಹಿಂದೂ ಸಮಾವೇಶ ಆಯೋಜಿಸಲಾಗಿದೆ. ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಎಂದರು.ಕುಳಾಯಿ ಕೋಟೆ ಬಬ್ಬು ಕೋಡ್ದಬ್ಬು ದೈವಸ್ಥಾನ ಅಧ್ಯಕ್ಷ ಯೋಗೀಶ್ ಕುಳಾಯಿ, ಧರ್ಮ ಚಾವಡಿ ಜೋಕಟ್ಟೆಯ ಧರ್ಮದರ್ಶಿ ವಸಂತ ಪೂಜಾರಿ, ಉಪನ್ಯಾಸಕಿ ಗೀತಾ ವೇಣುಗೋಪಾಲ್, ಪ್ರಖಂಡ ಕಾರ್ಯದರ್ಶಿ ಜಯರಾಮ್ ಕುಳಾಯಿ ಸಹಿತ ಇದ್ದರು.ಇದಕ್ಕೂ ಮುನ್ನ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾರ್ಯಕರ್ತರು, ಭಜನೆ, ಟ್ಯಾಬ್ಲೋ ಸಹಿತ ಮೆರವಣಿಗೆ ನಡೆಯಿತು.