ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಭಜನಾ ಸಂಸ್ಕೃತಿಯಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಸಾಧ್ಯವಾಗುತ್ತದೆ. ನಶಿಸಿ ಹೋಗುತ್ತಿರುವ ಭಜನಾ ಸಂಸ್ಕೃತಿಗೆ ನವಚೈತನ್ಯದೊಂದಿಗೆ ಜೀವಕಳೆ ನೀಡಿ ರಾಗ, ತಾಳ, ಲಯಬದ್ಧವಾಗಿ ಶಿಸ್ತಿನಿಂದ ಹೇಗೆ ಭಜನೆ ಮಾಡಬೇಕೆಂದು ಡಾ. ವೀರೇಂದ್ರ ಹೆಗ್ಗಡೆ ಕಳೆದ ೨೫ ವರ್ಷಗಳಿಂದ ತರಬೇತಿ ನೀಡಿ ವಿಶಿಷ್ಟ ಭಜನಾಪಟುಗಳನ್ನು ರೂಪಿಸಿದ್ದಾರೆ. ಇವರು ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆ ರೂವಾರಿಗಳಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಬೇಕೆಂದು ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜ ಹೇಳಿದ್ದಾರೆ.ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ೨೬ನೇ ವರ್ಷದ ಭಜನಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾಡದ ಸೇವೆಗಳಿಲ್ಲ. ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧನೀರಿನ ಘಟಕಗಳು, ಕೆರೆಗಳ ಪುನಶ್ಚೇತನ, ಮಹಿಳಾ ಸಬಲೀಕರಣ, ಜನಜಾಗೃತಿ ವೇದಿಕೆ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಎಂದರು.ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಭಜನೆಯಿಂದ ನಮ್ಮ ಭವ್ಯ ಪರಂಪರೆ ಮತ್ತು ಸಂಸ್ಕೃತಿ ರಕ್ಷಿಸಬಹುದು. ತರಬೇತಿ ಪಡೆದ ಭಜನಾಪಟುಗಳು ಅವರವರ ಊರಿನಲ್ಲಿ ಭಜನಾ ಸಂಸ್ಕೃತಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಭಜನಾ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಎಲ್ಲರೂ ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಭಜನೆ ಮಾಡಿದಾಗ ಆತ್ಮಶುದ್ಧಿಯಾಗುತ್ತದೆ. ಮಾನಸಿಕ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ಭಜನೆ ಹಾಡಿದರು.ಶಿಬಿರಾರ್ಥಿಗಳ ಪರವಾಗಿ ಉಮೇಶ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ವಾಚಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು.
ಧನ್ಯಕುಮಾರ್ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು. .................ಭಜನೆ ಪರಿಣಾಮದ ಬಗ್ಗೆ ಸಂಶೋಧನೆ೨೩ರಿಂದ ೨೮ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ೭ ದಿನಗಳ ಕಾಲ ನಡೆದ ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಭಜಕರಿಗೆ ಪ್ರಥಮ ಬಾರಿ ಭಜನೆಯಿಂದಾಗುವ ವೈದ್ಯಕೀಯ ಪರಿಣಾಮದ ಬಗ್ಗೆ ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಶೋಧನೆ ನಡೆಸಲಾಯಿತು.
ಭಜನೆ ಮೂಲಕ ಆಗುವ ಸಕಾರಾತ್ಮಕ ಬದಲಾವಣೆಗಳನ್ನು ಅಧ್ಯಯನದಿಂದ ತಿಳಿದುಬಂದಿದೆ. ಆರೋಗ್ಯದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತೋರಿಸಿದೆ, ಭಜನಾ ಕಮ್ಮಟದಲ್ಲಿ ಭಾವನಾತ್ಮಕ ಸ್ಥಿರತೆ ಉತ್ತಮಗೊಳಿಸುವುದು, ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಮನಸ್ಸಿನ ಮತ್ತು ದೇಹದ ಸ್ಥಿರತೆ ಉತ್ತೇಜನಗೊಳಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ದೇಹಕ್ಕೆ ಅತ್ಯಗತ್ಯವಾಗಿರುವ ಪಿತ್ತಜನಕಾಂಗದ ಚಟುವಟಿಕೆ ಉತ್ತಮಗೊಳ್ಳುತ್ತದೆ. ನರಮಂಡಲವನ್ನು ಸಮತೋಲನಗೊಳಿಸಿ ಮಾನಸಿಕ ಒತ್ತಡ ಕಡಿಮೆಮಾಡಿ ಉದ್ವೇಗದಿಂದ ಬರುವ ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿಯನ್ನು ಭಜಕರಲ್ಲಿ ಮೂಡಿಸುತ್ತದೆ ಎಂಬ ಫಲಿತಾಂಶ ಪಡೆಯಲಾಗಿದೆ.ಈ ಸಂಶೋಧನೆಯಲ್ಲಿ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಶಾಂತಿವನದ ಮುಖ್ಯ ವೈಧ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಹಾಗೂ ವೈದ್ಯರ ತಂಡದವರಿಂದ ಸಂಶೋಧನೆ ನಡೆಸಲಾಗಿದೆ.
ಈ ಭಜನಾ ಕಮ್ಮಟದಲ್ಲಿ ಪ್ರಥಮ ದಿನ ಹಾಗೂ ಕೊನೆಯ ದಿನ ಸಂಶೋಧನನಾ ತಂಡವು ಸುಮಾರು ೬೦೦ ಭಜಕರಲ್ಲಿ ೨೦ ಮಂದಿಯನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಿತ್ತು.