ಮಾನವ ಹಕ್ಕುಗಳ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ: ಶುಭ

KannadaprabhaNewsNetwork |  
Published : Dec 14, 2025, 03:45 AM IST
 ಕಾನೂನಿನ | Kannada Prabha

ಸಾರಾಂಶ

ಜಿಲ್ಲಾಡಳಿತ ವತಿಯಿಂದ ಮಾನವ ಹಕ್ಕುಗಳ ದಿನಾಚರಣೆ ನಡೆಯಿತು. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಐಶ್ವರ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇಂದಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ರಕ್ಷಣೆ ಪರಿಣಾಮಕಾರಿಯಾಗಿ ದೊರೆಯುತ್ತದೆ ಎಂಬುದು ಒಂದೆಡೆಯಾದರೆ, ಇದನ್ನು ದುರುಪಯೋಗ ಪಡಿಸಿಕೊಳ್ಳುವುದು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಮಾನವ ಹಕ್ಕುಗಳ ಸಂರಕ್ಷಣೆಯತ್ತ ಒತ್ತು ನೀಡುವುದು ಅಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಬುಧವಾರ ನಡೆದ ‘ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣ ಯುಗದಲ್ಲಿ ಸಿಸಿಟಿವಿ, ವಾಯ್ಸ್ ರೆಕಾರ್ಡ್, ವೀಡಿಯೋ ರೆಕಾರ್ಡ್, ಕಾಲ್ ರೆಕಾರ್ಡ್, ಹೀಗೆ ಹಲವು ಜಾಲತಾಣಗಳನ್ನು ಸಾಕ್ಷಿಯಾಗಿ ಪರಿಗಣಿಸಿ ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವುದು ಒಂದೆಡೆಯಾದರೆ, ತಿಳಿದೋ ತಿಳಿಯದೆ ಘಟನೆಗಳು ಆದಾಗ ಅದನ್ನೇ ನೆಪವಾಗಿ ಇಟ್ಟುಕೊಂಡು ಮಾನವರನ್ನು ಪೀಡಿಸುವುದು ಅಥವಾ ಸತಾಯಿಸುವುದು ಸಹ ಕಂಡುಬರುತ್ತದೆ. ಆದ್ದರಿಂದ ಮಾನವರ ವೈಯಕ್ತಿಕ ಹಕ್ಕುಗಳ ಜತೆಗೆ ಇತರರ ಹಕ್ಕುಗಳನ್ನು ಸಂರಕ್ಷಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಶುಭ ಅವರು ಪ್ರತಿಪಾದಿಸಿದರು.

ನ್ಯಾಯ ಕಲ್ಪಿಸಲಾಗುವುದು:

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ವಕೀಲರನ್ನು ನಿಯೋಜಿಸಿ ಅವಕಾಶ ವಂಚಿತರಿಗೆ ನ್ಯಾಯ ಕಲ್ಪಿಸಲಾಗುವುದು ಎಂದು ಶುಭ ಅವರು ಇದೇ ಸಂದರ್ಭದಲ್ಲಿ ನುಡಿದರು.

ಪ್ರತಿಯೊಬ್ಬ ಮನುಷ್ಯರು ವಿಶೇಷ ವ್ಯಕ್ತಿಯಾಗಿದ್ದು, ತನ್ನದೇ ಆದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬ ಕವಿವಾಣಿಯಂತೆ ಎಲ್ಲಾ ಮಾನವರು ಮುಕ್ತ ಮತ್ತು ಸಮಾನವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ, ಸಮಾಜದಲ್ಲಿ ದಮನಿತರಿಗೆ ಧ್ವನಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಮಾನವ ಹಕ್ಕುಗಳನ್ನು ಕಲ್ಪಿಸಬೇಕು ಎಂದರು.

ರಾಷ್ಟ್ರದ 150 ಕೋಟಿ ಜನರಲ್ಲಿ ಸಮಾನ ಅವಕಾಶ ಕಲ್ಪಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಮಾನವ ಜನ್ಮ ದೊಡ್ಡದು ಎಂಬಂತೆ, ಮಾನವ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ದೊರಕಬೇಕು ಎಂದರು.

ಮಾನವ ಸಮಾಜ ಜೀವಿಯಾಗಿದ್ದು, ಒಬ್ಬರು ಮತ್ತೊಬ್ಬರನ್ನು ಅವಲಂಬಿಸಿರುತ್ತಾರೆ. ಆದ್ದರಿಂದ ಮಹಿಳೆಯರು, ಮಕ್ಕಳು, ವಿಶೇಷಚೇತನರು ಸೇರಿದಂತೆ ಎಲ್ಲರನ್ನು ಗೌರವಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.

ಸಮಾಜದಲ್ಲಿ ಒಂದೇ ಬಾರಿ ಬದಲಾವಣೆ ಅಸಾಧ್ಯ. ಆದರೂ ಒಬ್ಬೊಬ್ಬರು ಪರಿವರ್ತನೆ ಆದಾಗ ಇಡೀ ಸಮಾಜ ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬಂತೆ ಸರ್ವರ ಮಾನವ ಹಕ್ಕು ಸಂರಕ್ಷಣೆ ಅಗತ್ಯ ಎಂದು ಅವರು ನುಡಿದರು.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಒಂದು ಒಳ್ಳೆಯ ಹಾಗೂ ಅರ್ಥಪೂರ್ಣ ಜೀವನ ನಡೆಸಲು ಬೇಕಾದ ಮೂಲಭೂತ ಅಗತ್ಯತೆಗಳನ್ನು ಖಾತರಿಗೊಳಿಸುತ್ತದೆ ಎಂದು ಅವರು ತಿಳಿಸಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ, ಪ್ರಪಂಚದಲ್ಲಿ ಶಾಂತಿ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಸ್ಥಾಪಿಸಲು ಮಾನವ ಕುಟುಂಬದ ಎಲ್ಲಾ ಸದಸ್ಯರಲ್ಲೂ ಅಡಕವಾಗಿರುವ ಘನತೆ ಹಾಗೂ ಸಮಾನವಾದ ಮತ್ತು ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಗುರುತಿಸುವುದು ಎಂದು ತಿಳಿಸಲಾಗಿದೆ ಎಂದರು.

ಮಾನವ ಹಕ್ಕು ಸಂರಕ್ಷಿಸಬಹುದಾಗಿದೆ:

ಜೀವಿಸುವ, ಮಾನವ ಘನತೆಯಿಂದ ಬದುಕುವ, ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಶೋಷಣೆ ವಿರುದ್ಧ ಹಕ್ಕುಗಳು ಮಾನವ ಹಕ್ಕುಗಳನ್ನು ಸಂರಕ್ಷಿಸಬಹುದಾಗಿದೆ ಎಂದು ಹೇಳಿದರು.

ಭಾರತ ಸಂವಿಧಾನಕ್ಕೆ ಸಂಪೂರ್ಣ ನಂಬಿಕೆ ಮತ್ತು ನಿಷ್ಠೆ ಹೊಂದಿದ್ದೇನೆ, ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಎಲ್ಲಾ ಕರ್ತವ್ಯಗಳನ್ನು ಸಂವಿಧಾನತ್ಮಕವಾಗಿ ನಿರ್ವಹಿಸುತ್ತೇನೆ. ಯಾವುದೇ ತಾರತಮ್ಯ ಇಲ್ಲದೆ ಏನೇ ಆದರೂ ಎಲ್ಲಾ ಮಾನವ ಜೀವಿಗಳ ಹಕ್ಕುಗಳನ್ನು ಗೌರವಿಸುತ್ತೇನೆ ಮತ್ತು ಎತ್ತಿ ಹಿಡಿಯುತ್ತೇವೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನನ್ನ ವಿಚಾರಗಳಿಂದ, ಮಾತುಗಳಿಂದ ಅಥವಾ ನಡವಳಿಕೆಯಿಂದ ಬೇರೆಯವರ ಮಾನವ ಹಕ್ಕು ಉಲ್ಲಂಘಿಸುವುದಿಲ್ಲ ಎಂದು ಉಪ ವಿಭಾಗಾಧಿಕಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಿದಾನಂದ ಕುಮಾರ್, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಜಿ.ಪಂ.ಎಂಜಿನಿಯರ್ ನಾಯಕ್, ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕರಾದ ಮಮತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಮಧುಕರ, ಮಹೇಶ್, ವಿವಿಧ ಇಲಾಖೆ ಸಿಬ್ಬಂದಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ