ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ

KannadaprabhaNewsNetwork |  
Published : Dec 11, 2025, 02:30 AM IST
10ಕೆಪಿಎಲ್21 ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಇವರುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕೊಪ್ಪಳ: ಮಾನವ ಹಕ್ಕು ಸಂರಕ್ಷಣೆ ಮಾಡುವಲ್ಲಿ ನಮ್ಮ ಮತ್ತು ನಿಮ್ಮ ಮೇಲೆ ಹೆಚ್ಚಿನ ರೀತಿಯ ಜವಾಬ್ದಾರಿ ಇವೆ.ಅದನ್ನು ಎಲ್ಲರೂ ಅರಿತುಕೊಂಡು ಇನ್ನೂ ಹೆಚ್ಚಿನ ರೀತಿಯ ಕ್ರಮ ಕೈಗೊಳ್ಳುವುದರ ಜತೆಗೆ ಎಲ್ಲರೂ ಒಟ್ಟಾಗಿ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.

ಅವರು ಬುಧವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹುಟ್ಟಿನಿಂದಲೇ ಎಲ್ಲರೂ ಮಾನವ ಹಕ್ಕುಗಳನ್ನು ಪಡೆದಿರುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಕ್ಕುಗಳು ಎಷ್ಟು ಮುಖ್ಯವೋ ಅಷ್ಟೇ ಕರ್ತವ್ಯಗಳು ಕೂಡ ಬಹಳ ಮುಖ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಒಬ್ಬ ಮನುಷ್ಯನನ್ನು ಮನುಷ್ಯನಾಗಿ ನೋಡಿಕೊಳ್ಳಲು ಅವಕಾಶಬೇಕು ಎನ್ನುವ ಕಾರಣಕ್ಕೆ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ. ಇಂತಹ ಅವಕಾಶ ನೀಡಿದ್ದರೂ ಸಹ ಇಂದಿನ ದಿನಗಳಲ್ಲಿ ನಾವು ತಾರತಮ್ಯ ಕಾಣಬಹುದಾಗಿದೆ. ವಿಶೇಷವಾಗಿ ನಮ್ಮ ಭಾಗದಲ್ಲಿ ಕೆಲವು ಕಡೆ ಇಂದಿಗೂ ಅಸ್ಪೃಶ್ಯತೆ ಆಚರಣೆ ಅನುಸರಿಸಲಾಗುತ್ತಿದೆ. ಇದು ಒಂದು ಮಾನವ ಹಕ್ಕುಗಳ ಉಲ್ಲಂಘನೆಗೆ ಉದಾಹರಣೆಯಾಗಿದೆ. ಇಂತಹ ಆಚರಣೆ ನಿರ್ಮೂಲನೆ ಮಾಡಿದಾಗ ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದರು.

ಒಬ್ಬರ ಹಕ್ಕು ಮತ್ತೊಬ್ಬರು ಉಲ್ಲಂಘನೆ ಮಾಡದಂತೆ ನೊಡಿಕೊಳ್ಳಬೇಕು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಹೋರಾಟ ನಾವು ಕಾಣುತ್ತೇವೆ. ಆ ಎಲ್ಲ ಹೋರಾಟಗಳ ಫಲ ಈ ಸಂವಿಧಾನದಲ್ಲಿ ಕಂಡಿದ್ದೇವೆ.ಹಾಗಾಗಿ ಸಂವಿಧಾನದ ಆಶಯ ನಾವು ಸರಿಯಾಗಿ ಪಾಲನೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಚರಿಸಲಾಗುತ್ತದೆ ಎಂದು ಹೇಳಿದರು.

ಕುಕನೂರು ತಾಲೂಕಿನ ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಹ ಪ್ರಾಧ್ಯಾಪಕ ಡಾ.ಪ್ರಭುರಾಜ್ ನಾಯಕ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕುರಿತು ಉಪನ್ಯಾಸ ನೀಡಿ, ಮಾನವ ಹಕ್ಕುಗಳು ಎಂದರೆ ಎಷ್ಟು ಸರಳವಾಗಿದೆ. ಆದರೆ, ಸರಳವಾಗಿರುವುದನ್ನು ಅಷ್ಟು ಸರಳವಾಗಿ ಸಾಮಾನ್ಯರಿಗೆ ಸಿಗಲು ಬಿಡುತ್ತಿಲ್ಲ. ಶುದ್ಧ ಗಾಳಿ ಮತ್ತು ನೀರು ಒಂದು ಮಾನವ ಹಕ್ಕಾಗಿದೆ. ಒಂದು ಶುದ್ಧ ಗಾಳಿ ನೂರು ಔಷಧಗಳಿಗೆ ಸಮ ಎನ್ನುವುದು ವಾಡಿಕೆ ಇದೆ. ಆದರೆ, ಇಂದು ಹಣ ಕೊಟ್ಟು ಬೆನ್ನು ಹಿಂದೆ ಗಾಳಿ ಹೊತ್ತುಕೊಂಡು, ದುಡ್ಡು ಕೊಟ್ಟು ಬಾಟಲಿ ನೀರನ್ನು ಕುಡಿಯುವ ಸ್ಥಿತಿ ಬಂದಿದೆ. ಜಗತ್ತಿನಲ್ಲಿ ಮಾನವನಿಗೆ ಮಾನವ ಹಕ್ಕಾಗಿರುವ ಗಾಳಿ, ನೀರು ಸಿಗುತ್ತಿಲ್ಲ. ಆಹಾರದಲ್ಲಿ ಮಾಲಿನ್ಯತೆ ತುಂಬಿದೆ. ಕಲಬರಿಕೆ ಆಹಾರ ಸೇವನೆಯಿಂದ ಮಾನವನ ಜೀವಿತ ಅವಧಿ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಮಾನವ ಹಕ್ಕು ಎಂದರೆ, ಮನುಷ್ಯ ಹುಟ್ಟುವಾಗ ಯಾವ ರೀತಿಯಲ್ಲಿ ಸಹಜವಾಗಿ ಹುಟ್ಟುತ್ತಾನೆ, ಅದೇ ರೀತಿ ಸಹಜವಾಗಿ ಸಾಯುವ ತನಕ ಯಾವುದೇ ಸಮಸ್ಯೆ ಇಲ್ಲದೆ ಸುಖಮಯ ಜೀವನ ಸಾಗಿಸುವುದೇ ಮಾನವ ಹಕ್ಕು ಆಗಿದೆ ಎಂದು ಹೇಳಿದರು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ವ್ಯವಸ್ಥಾಪಕ ಹರೀಶ್ ಜೋಗಿ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ