ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಅರುಂಧತಿ

KannadaprabhaNewsNetwork |  
Published : Jun 07, 2024, 12:33 AM IST
ಕಾರ್ಯಕ್ರಮವನ್ನು ನಿವೃತ್ತ ಪ್ರಾ.ಡಾ. ಸಿ.ಎಸ್.ಹಸಬಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಾಚೀನ ಭಾರತೀಯ ಧರ್ಮವು ಜ್ಞಾನದ ಮುಕ್ತ ಹರಿವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸುಗಮಗೊಳಿಸುತ್ತಿತ್ತು

ಗದಗ: ನಮ್ಮ ಬೌದ್ಧಿಕ ಆಸ್ತಿಗಳಿಗೆ ಸರಿಯಾದ ಬೇಲಿ ಹಾಕಿ, ಅದನ್ನು ಆರ್ಥಿಕ ಬೆಳವಣಿಗೆಗೆ ಬಳೆಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಗಟ್ಟಿ ಹೆಜ್ಜೆ ಇಡಬೇಕಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ಡೀನ್‌ ಅರುಂಧತಿ ಕುಲಕರ್ಣಿ ಹೇಳಿದರು.

ನಗರದ ಕೆಎಲ್ಎ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು ವಿಷಯದ ಕುರಿತು ನಡೆದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರ ಇತ್ತೀಚಿಗೆ ಸಮಗ್ರ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ನೀತಿ ಪ್ರಕಟಿಸಿದೆ. ನಮ್ಮ ಬೌದ್ಧಿಕ ಆಸ್ತಿ ದುರ್ಬಳಕೆ ಆಗದಂತೆ ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಲೋಚನೆ ಇತರರಿಗೆ ಕದಿಯಲು ಬಿಟ್ಟರೆ ಯಶಸ್ವಿನ ಹಾದಿಗೆ ನಾವೇ ಅಡ್ಡಗಾಲು ಹಾಕಿದಂತೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾ. ಡಾ. ಸಿ.ಎಸ್.ಹಸಬಿ ಮಾತನಾಡಿ, ದೇಶದಲ್ಲಿ ವ್ಯಾಪಾರ-ವಹಿವಾಟಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಬೌದ್ಧಿಕ ಆಸ್ತಿ ಹಕ್ಕು ಅತ್ಯಂತ ಮುಖ್ಯವಾದದ್ದು. ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸಿ, ಸ್ವದೇಶಿ ಉತ್ಪನ್ನ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಹೊಸದಾಗಿ ಕಂಡು ಹಿಡಿಯುವ ಅವಿಷ್ಕಾರಗಳ ಟ್ರೇಡ್‌ಮಾರ್ಕ್ ಹಾಗೂ ಹಕ್ಕು ಸ್ವಾಮ್ಯ ರಕ್ಷಿಸಿಕೊಳ್ಳುವುದು, ಸೃಜನಶೀಲತೆ, ಸಂಶೋಧನೆ ಮೂಲಕ ಉದ್ಯಮಶೀಲತೆ ಉತ್ತೇಜಿಸುವುದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರೇರೇಪಿಸುವುದು ಇದರ ಭಾಗವಾಗಿದೆ. ವಿದ್ಯಾರ್ಥಿಗಳು ಉದ್ದಿಮೆದಾರರಾಗುವ ಮುನ್ನ ತಮ್ಮ ಉತ್ಪನ್ನಗಳಿಗೆ ಪ್ರಮಾಣ ಪತ್ರ ಪಡೆಯುವುದರಿಂದ ವಿದೇಶಿ ವಸ್ತುಗಳಿಗೆ ಪೈಪೋಟಿ ನೀಡಲು ಅನುಕೂಲವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾ. ಎ.ಕೆ.ಮಠ ಮಾತನಾಡಿ, ಪ್ರಾಚೀನ ಭಾರತೀಯ ಧರ್ಮವು ಜ್ಞಾನದ ಮುಕ್ತ ಹರಿವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸುಗಮಗೊಳಿಸುತ್ತಿತ್ತು. ವೇದಗಳಲ್ಲಿ ಉಪನಿಷತ್ತುಗಳಲ್ಲಿ ಅಡಗಿರುವ ರಹಸ್ಯಗಳು ಭಾರತೀಯರಿಗಿಂತ ಹೆಚ್ಚಾಗಿ ವಿದೇಶಿಯರೇ ಬಳಸಲ್ಪಟ್ಟಿದ್ದಾರೆ. ಹೀಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ಜ್ಞಾನವು ಇಂದು ಎಲ್ಲರ ಅಗತ್ಯವಾಗಿದೆ ಎಂದರು.

ಈ ವೇಳೆ ಉಪ ಪ್ರಾ. ಡಾ.ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರೊ. ಗೌರಾ ಯಳಮಲಿ ನಿರೂಪಿಸಿದರು. ಪ್ರೊ. ಚಂದಾಲಿಂಗ ಹಳ್ಳಿಕೇರಿ ವಂದಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ