ದಾಬಸ್‍ಪೇಟೆ: ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಒಂದು ಇಲಾಖೆಯ ಕೆಲಸವಲ್ಲ, ಎಲ್ಲ ಇಲಾಖೆ ಹಾಗೂ ಸಮಾಜದ ಪ್ರತಿಯೊಬ್ಬರ ಹೊಣೆ ಎಂದು ಗ್ರಾಪಂ ಅಧ್ಯಕ್ಷ ಟಿ.ಎಚ್.ಮಲ್ಲೇಶ್ ಹೇಳಿದರು.
ಪಿಡಿಒ ರೇಖಾ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವುದು ಪ್ರತಿಯೊಬ್ಬರ ಹೊಣೆ. ಜೊತೆಗೆ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು, ಓದುವತ್ತ ಸರಿಯಾಗಿ ಗಮನ ಹರಿಸುತ್ತಿಲ್ಲ. ಅಲ್ಲದೆ, ಮೊಬೈಲ್‌ಗಳಲ್ಲಿ ಕಾಣಸಿಗುವ ಅಶ್ಲೀಲ, ಅಪರಾಧ ಇತರೆ ನೋಡಬಾರದ ವಿಡಿಯೋಗಳನ್ನು ವೀಕ್ಷಿಸಿ ಅವರಲ್ಲಿ ಕ್ರೌರ್ಯ, ಅಪರಾಧ ಚಟುವಟಿಕೆಗಳು ದುಷ್ಪರಿಣಾಮ ಬೀರುತ್ತಿವೆ. ಹಾಗಾಗಿ ಪೋಷಕರು ಮಕ್ಕಳು ಮೊಬೈಲ್ ವೀಕ್ಷಣೆಗೆ ಅವಕಾಶ ನೀಡಬಾರದು ಹಾಗೂ ನಿಗಾ ವಹಿಸಬೇಕು ಎಂದು ಹೇಳಿದರು.
ನೋಡಲ್ ಅಧಿಕಾರಿ ಹಾಗೂ ಬಿಇಒ ಕೆ.ಸಿ.ರಮೇಶ್ ಮಾತನಾಡಿ, ರಾಜ್ಯದಲ್ಲಿ ದಿನೇದಿನೆ ಬಾಲ್ಯವಿವಾಹ, ಬಾಲಕಾರ್ಮಿಕ ಮತ್ತು ಮಕ್ಕಳ ಸಾಗಾಣಿಕೆ ಸಂಖ್ಯೆ ಹೆಚ್ಚುತ್ತಿದ್ದು ತಾಲೂಕಿನಲ್ಲಿ ಸುಮಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಇವುಗಳನ್ನು ತಡೆಗಟ್ಟಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಾಗೂ ಗ್ರಾಮಸ್ಥರು ಅಧಿಕಾರಿಗಳಿಗೆ ಸಹಕರಿಸಬೇಕು. ಮಕ್ಕಳಿಗೆ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತೆ ಗಂಗಮ್ಮ ಮಾತನಾಡಿ, ಗ್ರಾಮದಲ್ಲಿ 15ರಿಂದ 16 ವರ್ಷದ ಮಕ್ಕಳು ಮೊಬೈಲ್ ಬಳಕೆಯಿಂದ ಪ್ರೀತಿ-ಪ್ರೇಮಕ್ಕೆ ಸಿಲುಕಿ ಹಾಳಾಗುತ್ತಿದ್ದಾರೆ. ವಸತಿ ಶಾಲೆಯ ಮಕ್ಕಳಲ್ಲಿ ಶಿಸ್ತು ಪಾಲನೆ ಮತ್ತು ಓದುವುದರಲ್ಲಿ ಆಸಕ್ತಿ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಮಹಿಮಣ್ಣ, ಸುಜಿತ್ ಕುಮಾರ್, ನಾಗೇಂದ್ರ, ವಾಸುದೇವ್, ಪ್ರಹ್ಲಾದ್, ಚಿಕ್ಕತಿಮ್ಮಯ್ಯ ಅಬ್ದುಲ್‍ಖಾದರ್, ವಸೀಮ್, ತಾಲೀಬ್, ಉಮಾ, ಆಶಾ, ಮಂಗಳ, ಸುಮಿತ್ರಾ, ರತ್ನಮ್ಮ, ಮುಬೀನ್‍ತಾಜ್, ಸಲ್ಮಾ, ಜಬಿನ್‍ತಾಜ್, ತುಳಸಿ, ಉಷಾರಾಣಿ, ಕಾರ್ಯದರ್ಶಿ ನಾಗರತ್ನಮ್ಮ, ಪಂಚಾಯಿತಿ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಪೋಟೋ 3 :
ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಹಾಗೂ ವಿಶೇಷಚೇತನರ ಸಮನ್ವಯ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷ ಟಿ.ಎಚ್.ಮಲ್ಲೇಶ್ ಉದ್ಘಾಟಿಸಿದರು.