ಕನ್ನಡಪ್ರಭ ವಾರ್ತೆ ಹೊನ್ನಾವರ
ಉತ್ತರ ಕನ್ನಡ ಮತ್ತು ಮಲೆನಾಡಿನ ಕೆಲವು ಪ್ರದೇಶದಲ್ಲಿ ಶೇ. 80ರಷ್ಟು ಅರಣ್ಯ ಭೂಮಿ ಇರುವುದರಿಂದ ಆಭಾಗದ ನೆರೆಸಂತ್ರಸ್ತರ ಪುನರ್ವಸತಿ, ವಸತಿ ಮತ್ತು ಜೀವನೋಪಾಯಕ್ಕೆ ಅಲ್ಲಿನ ಬಡಜನರು ಅರಣ್ಯ ಭೂಮಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ಇನ್ನೊಂದೆಡೆ ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರ ಸಮಸ್ಯೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಭೂಮಿಯ ಅವಶ್ಯಕತೆ ಇರುವದು ಸರ್ಕಾರದ ಗಮನದಲ್ಲಿದೆ. ಆದ್ದರಿಂದ 2005ರ ಪೂರ್ವದಿಂದ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಆತಂಕ ಪಡುವ ಅಗತ್ಯವಿಲ್ಲ. ಸಣ್ಣ ಹಿಡುವಳಿದಾರರ ಹಿತರಕ್ಷಣೆ ಮಾಡಲಾಗುವುದು ಎಂದು ಅರಣ್ಯ ಪರಿಸರ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ತಮ್ಮನ್ನು ಭೇಟಿಯಾದ ಉತ್ತರ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ, ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ನೇತೃತ್ವದ ಜಂಟಿ ನಿಯೋಗದ ಅಹವಾಲು ಆಲಿಸಿದ ಬಳಿಕ ಅರಣ್ಯಭೂಮಿ ಸಕ್ರಮದ ಕುರಿತು ಸರ್ಕಾರದ ನಿಲುವನ್ನು ಸಚಿವರು ಸ್ಪಷ್ಟಪಡಿಸಿದರು.ಸಾವಿರಾರು ಅರ್ಹರು ಭೂಮಿ ಹಕ್ಕಿನಿಂದ ವಂಚಿತರಾಗಿರುವ ವಿಚಾರವನ್ನು ನಿಯೋಗ ಸಚಿವರ ಗಮನ ಸೆಳೆದಿದ್ದು, ಸರ್ಕಾರದ ನಿರ್ಣಯವನ್ನು ಪರಿಶೀಲಿಸಿ ಮರುಸಮೀಕ್ಷೆಗೆ ಅಧೀಕೃತ ಆದೇಶ ಮಾಡುವುದಾಗಿ ಮತ್ತು ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿ ಅರ್ಹರು ಭೂಮಿಯ ಹಕ್ಕಿನಿಂದ ವಂಚಿತರಾಗದಂತೆ ಅರಣ್ಯ ಇಲಾಖೆ ಸಹಕಾರ ನೀಡಲಿದೆ ಅರಣ್ಯ ಸಚಿವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.