ಕನ್ನಡಪ್ರಭ ವಾರ್ತೆ, ಚನ್ನಗಿರಿ
ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಕೆರೆಯ ಸುತ್ತಲೂ 1 ಕಿ.ಮೀ. ಸುತ್ತಳತೆಯಲ್ಲಿ ಸುಸಜ್ಜಿತ ವಾಕಿಂಗ್ ಪಾತ್ ನಿರ್ಮಾಣವಾಗಿ ಮೂರು ವರ್ಷಗಳೇ ಕಳೆದಿವೆ. ಪುರುಷರಿಗೆ, ಮಹಿಳೆಯರಿಗೆ, ವಯೋವೃದ್ದರಿಗೆ ವಾಯುವಿಹಾರ ನಡೆಸಲು ಇದು ಉತ್ತಮ ವಾತಾವರಣದ ಪ್ರದೇಶವಾಗಿದೆ. ಆದರೆ, ಕೆಲವು ಅವಿವೇಕಿಗಳ ಕುಚೇಷ್ಟೆಗಳಿಂದ ವಾಯು ವಿಹಾರಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದ ಜನರ ವಾಯುವಿಹಾರಕ್ಕೆಂದು 2019- 2020ರಲ್ಲಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ₹3.5 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ಕೆರೆಯ ಹೂಳು ತೆಗೆಯುವುದು ಮತ್ತು ಸುತ್ತಲೂ ಓಡಾಡುವ ವಾಕಿಂಗ್ ಪಾತ್ ನಿರ್ಮಾಣ, ಕೆರೆಗೆ ತಡೆಬೇಲಿ, ಅಲಂಕಾರಿಕಾ ವಿದ್ಯುತ್ ದೀಪಗಳು ಹೀಗೆ ಅಕರ್ಷಕ ವಾಕಿಂಗ್ ಪಾತ್ ನಿರ್ಮಿಸಿ, ನಾಗರಿಕರಿಗೆ ಸೌಲಭ್ಯ ಕಲ್ಪಿಸಿದ್ದರು. ಪಟ್ಟಣದ ಜನತೆ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಯುವಿಹಾರ ನಡೆಸಲು ಸುಸಜ್ಜಿತ ತಾಣ ಇದಾಗಿತ್ತು.
ಆದರೆ, ಈ ಪ್ರದೇಶದಲ್ಲೀಗ ಮದ್ಯವ್ಯಸನಿಗಳ ಕಾಟ ಶುರುವಾಗಿದೆ. ಮದ್ಯಪಾನ ಮಾಡುವವರು ಒಂದೆಡೆಯಾದರೆ, ಗಂಟೆಗಟ್ಟಲೆ ಕುಳಿತು ಮೊಬೈಲ್‌ಗಳ ವೀಕ್ಷಿಸುವ ಹಲವರು ವಾಯುವಿಹಾರಿ ಮಹಿಳೆಯರನ್ನು ಕೆಕ್ಕರಿಸಿಕೊಂಡು ನೋಡುವ ನಡೆ ಪ್ರದರ್ಶಿಸುತ್ತಿದ್ದಾರೆ. ಇಂಥವುಗಳಿಂದ ಮಹಿಳೆಯರು ಮುಜುಗರಗೊಳ್ಳುತ್ತಿದ್ದಾರೆ. ಸಂಜೆ ಸಮಯದಲ್ಲಿ ವಾಯು ವಿಹಾರ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಪುರಸಭೆ ಮಾಜಿ ಸದಸ್ಯ ಪಿ.ಬಿ.ನಾಯಕ ಹೇಳುತ್ತಾರೆ.ವಾಯು ವಿಹಾರ ನಡೆಸುವವರು ಕುಳಿತು ವಿಶ್ರಾಂತಿ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಲಯನ್ಸ್ ಕ್ಲಬ್‌ನವರು ಮೂರು ಸಿಮೆಂಟ್ ಆಸನಗಳನ್ನು ಫೆಬ್ರವರಿ 29ರಂದು ಹಾಕಿಸಿ, ಜನಸೇವೆಗೆ ಸ್ಪಂದಿಸಿದ್ದಾರೆ. ಆದರೆ, ಈ ಮೂರು ಆಸನಗಳನ್ನು ಕಿಡಿಗೇಡಿಗಳು ತಿಂಗಳು ಕಳೆಯುವುದರೊಳಗೆ ಧ್ವಂಸಗೊಳಿಸಿದ್ದಾರೆ.
ಕೆರೆಯ ವಾಯುವಿಹಾರ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಯಾವುದೇ ರೀತಿಯ ಗಂಭೀರ ಅನಾಹುತಗಳು ಸಂಭವಿಸುವ ಮೊದಲೇ ರಕ್ಷಣಾ ಹೊಣೆಹೊತ್ತ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೂಕ್ತ ಕ್ರಮ ಜರುಗಿಸಬೇಕಿದೆ. ಸಂಜೆ 7ರಿಂದ 9 ಗಂಟೆಯವರೆಗೆ ಇಲ್ಲಿ ಗಸ್ತು ವ್ಯವಸ್ಥೆ ಕಲ್ಪಿಸಬೇಕಿದೆ. ಇದರಿಂದ ಕಿಡಿಗೇಡಿಗಳ ಹಾವಳಿ ತಪ್ಪಲಿದೆ. ಅಲ್ಲದೇ, ಈ ಪ್ರದೇಶದಲ್ಲಿ ಸಿ.ಸಿ. ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕಾದ ಜರೂರತ್ತಿದೆ. ಈ ವ್ಯವಸ್ಥೆಗಳು ಜಾರಿಯಾದರೆ, ವಾಯುವಿಹಾರಿಗಳು ಧೈರ್ಯದಿಂದ ಭೇಟಿ ನೀಡಲು ಸಹಾಯಕವಾಗುತ್ತದೆ ಎಂಬುದು ಜಿಪಂ ಮಾಜಿ ಸದಸ್ಯ ಸಿ.ಕೆ.ಎಚ್. ಮಹೇಶ್ವರಪ್ಪ ಅವರ ಅಭಿಪ್ರಾಯ.- - - -30ಕೆಸಿಎನ್‌ಜಿ2:
ದಾವಣಗೆರೆ ಪಟ್ಟಣದ ಕೆರೆಯ ಸುತ್ತ ಇರುವ ವಾಕಿಂಗ್ ಪಾತ್ ಬಳಿ ಅಳವಡಿಸಿದ್ದ ಆಸನಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವುದು.