ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂಧನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jul 13, 2024, 01:39 AM ISTUpdated : Jul 13, 2024, 01:40 AM IST
12ಎಚ್‌ಪಿಟಿ2- ಹೊಸಪೇಟೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅವರಿಗೆ ಅಕ್ರಮವಾಗಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ.

ಹೊಸಪೇಟೆ: ಮುಡಾ ಹಗರಣದ ತನಿಖೆಗೆ ಒತ್ತಾಯಿಸಿ ಹೋರಾಟ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಮೋರ್ಚಾದಿಂದ ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಬಿಜೆಪಿ ಕಚೇರಿಯಿಂದ ಆಗಮಿಸಿದ ಪ್ರತಿಭಟನಾಕಾರರು, ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಕಿಚಿಡಿ ಕೊಟ್ರೇಶ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅವರಿಗೆ ಅಕ್ರಮವಾಗಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಸಾವಿರಾರು ಕೋಟಿ ಅಕ್ರಮ ಮುಡಾದಲ್ಲಿ ನಡೆದಿದ್ದು, ಇದನ್ನು ಖಂಡಿಸಿ ಹೋರಾಟಕ್ಕೆ ಇಳಿದ ಬಿಜೆಪಿ ಮುಖಂಡರನ್ನು ಸರ್ಕಾರ ಪೊಲೀಸರನ್ನು ಬಳಸಿ ಬಂಧನ ಮಾಡುತ್ತಿದೆ. ಮೈಸೂರಿನಲ್ಲಿ ಬೃಹತ್‌ ಹೋರಾಟ ನಡೆಸಿದ ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಕ್ಷದ ಮುಖಂಡರಾದ ಆರ್‌. ಅಶೋಕ್‌, ಅಶ್ವತ್ಥ ನಾರಾಯಣ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಿಎಂ ಸೂಚನೆ ಮೇರೆಗೆ ಬಂಧನ ಮಾಡಲಾಗಿದೆ. ಹೋರಾಟ ದಮನ ಮಾಡುವ ಕೆಲಸವನ್ನು ಸರ್ಕಾರ ಮಾಡಬಾರದು. ಮೊದಲು ತನಿಖೆ ನಡೆಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಂವಿಧಾನದ ಹೆಸರಿನಲ್ಲಿ ಆಡಳಿತಕ್ಕೆ ಬಂದಿದ್ದಾರೆ. ಲೋಕಸಭೆ ಚುನಾವಣೆ ವೇಳೆಯಲ್ಲೂ ಸಂವಿಧಾನವನ್ನೇ ಮುಂದಿಟ್ಟು ಪ್ರಚಾರ ನಡೆಸಿದ್ದಾರೆ. ಆದರೆ, ಈಗ ಮಾಡುತ್ತಿರುವುದು ಏನು? ಹೋರಾಟಗಾರರನ್ನು ಬಂಧಿಸಿರುವುದು ಸಂವಿಧಾನ ವಿರೋಧಿ ಚಟುವಟಿಕೆ ಅಲ್ಲವೇ? ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಗರಣಗಳ ಮೇಲೆ ಹಗರಣ ಮಾಡುತ್ತಿದೆ. ಬಿಜೆಪಿ ಹೋರಾಟದ ಮೂಲಕ ಎಲ್ಲವನ್ನೂ ಬಯಲಿಗೆ ತರುತ್ತಿದೆ. ಇದನ್ನು ಸಹಿಸದೇ ಪೊಲೀಸರನ್ನು ಛೂಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಂಧಿಸಲಾಗಿದೆ. ಹೋರಾಟದ ಗುಣದಿಂದ ಬಂದಿರುವ ವಿಜಯೇಂದ್ರ ಇಂತಹ ಬಂಧನಕ್ಕೆ ಜಗ್ಗುವುದಿಲ್ಲ. ಈ ರಾಜ್ಯದ ಜನರ ತೆರಿಗೆ ಹಣ ಲೂಟಿಯಾಗದಂತೆ ನೋಡಿಕೊಳ್ಳುತ್ತಾರೆ. ಸದನದ ಒಳಗೂ ಹಾಗೂ ಹೊರಗೂ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರ ಕೂಡಲೇ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಮುಖಂಡರಾದ ಶಂಕರ ಮೇಟಿ, ಸೂರಿ ಬಂಗಾರು, ಗೌಳಿ ರುದ್ರಪ್ಪ, ರೇವಣ ಸಿದ್ದಪ್ಪ, ಮಧುರ ಚನ್ನಶಾಸ್ತ್ರಿ, ಚಂದ್ರು ದೇವಲಾಪುರ, ನಾಗರಾಜ, ಶ್ರೀಕಾಂತ್‌ ಪೂಜಾರಿ, ಹೊನ್ನೂರಪ್ಪ, ಕವಿತಾ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ