ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕಳೆದ 75 ವರ್ಷಗಳಿಂದ ಮಂಗಳವಾರಪೇಟೆಯಲ್ಲಿನ ತುಂಡು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದು, ನಮ್ಮ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಲವಂತವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರಪೇಟೆ ರೈತರು ಹಾಗೂ ರೈತ ಸಂಘಟನೆಯ ಮುಖಂಡರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿ ರೈತರು ಹಾಗೂ ರೈತ ಸಂಘಟನೆಯ ಮುಖಂಡರು, ಸರ್ವೆ ನಂಬರ್ 52, 53 ಹಾಗೂ 67 ರಲ್ಲಿ ಒಟ್ಟು 24 ಜನರಿಗೆ 75 ವರ್ಷಗಳ ಹಿಂದೆಯೇ 17 ಎಕರೆ 24 ಗುಂಟೆ ಜಮೀನು ಭೂ ಮಂಜುರಾತಿಯಾಗಿದೆ. ಈ ಜಮೀನಿನಲ್ಲಿ ನಾವು ಅಂದಿನಿಂದ ಇಂದಿನವರೆಗೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಕಳೆದ ಶನಿವಾರ ಮಂಗಳವಾರಪೇಟೆಯ ಆರು ಮಂದಿ ಏಕಾಏಕಿ ನಮ್ಮ ಭೂಮಿಗೆ ಬಂದು ಇದು ನಮಗೆ ಸೇರಿದ್ದೆಂದು ಪುಡಿ ರೌಡಿಗಳ ಜೊತೆ ಭತ್ತದ ಬೆಳೆಯನ್ನು ನಾಶಪಡಿಸಿ ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಿದರು.ಹತ್ತಾರು ವರ್ಷಗಳಿಂದ ಆ ಭೂಮಿಯನ್ನು ನಂಬಿಕೊಂಡೆ ನಮ್ಮ ಬದುಕು ಸಾಗುತ್ತಿದ್ದು ಇದೀಗ ಈ ಭೂಮಿ ನಮ್ಮದೆಂದು ಬಂದರೆ ನಮ್ಮ ಗತಿ ಏನು. ನಮಗೆ ಇಷ್ಟು ಅನ್ಯಾಯವಾಗುತ್ತಿದ್ದರೂ ನ್ಯಾಯ ಕೊಡಿಸಬೇಕಾದ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಹಿರಿಯ ರೈತ ನಾಯಕಿ ಅನುಸೂಯಮ್ಮ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಅದನ್ನು ಕಡೆಗಣಿಸಿ ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು ಖಂಡನೀಯ. ಇಂತಹ ಘಟನೆಗಳಿಗೆ ಅವಕಾಶ ನೀಡಿರುವ ತಾಲೂಕು ಆಡಳಿತದ ನಡೆ ರಿಯಲ್ ಎಸ್ಟೇಟ್ ಮಾಫಿಯಾ ಪರವಾಗಿ ನಿಂತಿರುವಂತೆ ಭಾಸವಾಗುತ್ತಿದೆ ಎಂದರು.ರೈತ ಮಹಿಳೆ ಮಂಗಳವಾರಪೇಟೆ ರತ್ನಮ್ಮ ಮಾತನಾಡಿ, ನಮ್ಮ ಮಾವನವರ ಕಾಲದಿಂದಲೂ ಆ ಭೂಮಿಯಲ್ಲಿ ಬೇಸಾಯ ಮಾಡಿಕೊಂಡು ಬರುತ್ತಿದ್ದೇವೆ, ಈ ಕ್ಷಣಕ್ಕೂ ಅಲ್ಲಿ ಭತ್ತ ಬೆಳೆದಿದ್ದು, ಶನಿವಾರ ಹತ್ತಾರು ಮಂದಿ ಆಗಮಿಸಿ, ಜಮೀನು ನಮ್ಮದೆಂದು ಏಕಾಏಕಿ ಕಲ್ಲು ಕಂಭ ನೆಡಲು ಮುಂದಾದರೂ. ನಾವೆಲ್ಲ ಸೇರಿ ಪ್ರತಿಭಟಿಸಿ ವಿರೋಧಿಸಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿರುವುದಾಗಿ ವಿವರಣೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಅಮ್ಮಳ್ಳಿದೊಡ್ಡಿ ರಾಮೇಗೌಡ, ಸಿಂಗರಾಜಿಪುರ ದೇವರಾಜು, ಮಂಗಳವಾರ ಪೇಟೆ ವಿಶ್ವ, ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.ಪೋಟೊ೧೩ಸಿಪಿಟಿ೧: ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಂಗಳವಾರಪೇಟೆ ಗ್ರಾಮಸ್ಥರು ಹಾಗೂ ರೈತಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.