ಬೇಲೂರು ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ವಿರೋಧ

KannadaprabhaNewsNetwork | Published : Jul 29, 2024 12:47 AM

ಸಾರಾಂಶ

ಬೇಲೂರು ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಹೊರಟಿರುವ ಶಾಸಕರ ವಿರುದ್ಧ ಪ್ರಗತಿಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣವನ್ನು ಸ್ಥಳಾಂತರಿಸದೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಖಾಲಿ ಜಾಗವನ್ನು ಪಡೆಯುವ ಮೂಲಕ ಇಲ್ಲಿಯೇ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಹೊರಟಿರುವ ಶಾಸಕರ ವಿರುದ್ಧ ಪ್ರಗತಿಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.

ಬಸ್ ನಿಲ್ದಾಣವನ್ನು ಬದಲಿ ವ್ಯವಸ್ಥೆ ಮಾಡಿ ಬೇರೆ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲು ಶಾಸಕ ಎಚ್ ಕೆ ಸುರೇಶ್‌ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಪೂರ್ವಭಾವಿ ಸಭೆಯನ್ನು ದಾಸೋಹ ಭವನದಲ್ಲಿ ಕರೆಯಲಾಗಿತ್ತು. ಆದರೆ ಶಾಸಕರು ಕೆಲಸದ ನಿಮಿತ್ತ ಎರಡು ಗಂಟೆಗಳ ಕಾಲ ತಡವಾಗಿ ಬಂದಿದ್ದಕ್ಕೆ ಸಂಘಟನೆಯ ಹಾಗು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.

ನಂತರ ಬಸ್ ನಿಲ್ದಾಣವನ್ನು ಸ್ಥಳಾಂತರಿಸದೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಖಾಲಿ ಜಾಗವನ್ನು ಪಡೆಯುವ ಮೂಲಕ ಇಲ್ಲಿಯೇ ಅಭಿವೃದ್ಧಿಪಡಿಸಬೇಕೆಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಪ್ರಗತಿ ಪರ ಸಂಘಟನೆಯ ಕರವೇ ಅಧ್ಯಕ್ಷ ಚಂದ್ರಶೇಖರ್, ಪ್ರವೀಣ್ ಶೆಟ್ಟಿ ಬಣದ ಭೋಜೇಗೌಡ, ಜಯಕರ್ನಾಟಕ ಸಂಘಟನೆಯ ರಾಜು ಮತ್ತು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್, ಸ್ವಾಮೀಗೌಡ ಹಾಗೂ ಸಾಮಾಜಿಕ ಹೋರಾಟಗಾರ ವೆಂಕಟೇಶ್ ಅವರ ನೇತೃತ್ವದಲ್ಲಿ ನೂರಾರು ಜನರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕರವೇ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಪ್ರವೀಣ್ ಶೆಟ್ಟಿ ಬಣದ ಭೋಜೇಗೌಡ ಮಾತನಾಡಿ, ವಿಶ್ವವಿಖ್ಯಾತ ಪ್ರವಾಸಿ‌ ಕೇಂದ್ರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣವನ್ನು ತೆರವು ಮಾಡಿ ರಾಯಪುರದ ಬಳಿ ನಿರ್ಮಿಸಲು ಹೊರಟಿರುವ ನಿರ್ಧಾರ ಸರಿಯಲ್ಲ. ಇದಕ್ಕೆ ತಾಲೂಕಿನ ಜನತೆಯ ವಿರೋಧವಿದೆ. ನೀವು ಮಾಡುವ ಅಭಿವೃದ್ಧಿ ಕೆಲಸಗಳಿಗೆ ಹಾಗೂ ಭ್ರಷ್ಟಾಚಾರ ಮುಕ್ತ ತಾಲೂಕನ್ನು ಮಾಡಲು ಹೊರಟಿರುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಇಲ್ಲಿಯ ಬಸ್ ನಿಲ್ದಾಣವನ್ನು ನಾಲ್ಕು ಕಿ.ಮೀ. ಹೊರಗಡೆ ಹಾಕಿದರೆ ಸಾರ್ವಜನಿಕರಿಗ ಹಾಗೂ ವಿದ್ಯಾರ್ಥಿಗಳಿಗೆ, ವಾಣಿಜ್ಯ ವ್ಯಾಪಾರಗಳಿಗೆ, ಆಸ್ಪತ್ರೆಗೆ, ಕೋರ್ಟಿಗೆ ತೆರಳುವವರಿಗೆ ತುಂಬಾ ತೊಂದರೆಯಾಗುತ್ತದೆ. ಕೂಡಲೆ ಅದನ್ನು ಕೈಬಿಟ್ಟು ಹಳೆ ಬಸ್ ನಿಲ್ದಾಣ ಪಕ್ಕದಲ್ಲಿರುವ ವೇಲಾಪುರಿ ಹೋಟೆಲ್ ಬಳಿಯ ಹಿಂಭಾಗದ ಜಾಗ ಹಾಗೂ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಪ್ರವಾಸಿ ಮಂದಿರದ ಜಾಗ ಪಡೆದು ಅಭಿವೃದ್ಧಿ ಪಡಿಸಲಿ ಎಂದು ಒತ್ತಾಯಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗೌಡ ಮಾತನಾಡಿ, ಸಾಕಷ್ಟು ವರ್ಷಗಳ ಸಂಘಟನೆಗಳ ಹೋರಾಟದ ಫಲವಾಗಿ ಒಂದು ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ‌. ಈ ಹಿಂದೆ ಬಸ್ ನಿಲ್ದಾಣ ಕಿರಿದಾಗಿದೆ ಎಂದು ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಹಿಂದಿನ ಶಾಸಕರಾದ ರುದ್ರೇಶ್ ಗೌಡ ಅವರು ಇಲ್ಲಿನ ಜಾಗವನ್ನು ಗುರ್ತಿಸಿ ಅಗಲೀಕರಣ ಮಾಡಲು ಮುಂದಾಗಿದ್ದರು. ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಅವರು ಸಹ ಅಭಿವೃದ್ಧಿ ಪಡಿಸಲು ಹೋರಾಟ ಮಾಡಿ ಹಣ ತಂದು ನವೀಕರಣ ಮಾಡಿದ್ದರು. ಆದರೆ ಈಗಿನ ಶಾಸಕರು ಕೆರೆಕಟ್ಟೆಗಳನ್ನು ಮುಚ್ಚಿ ಬಸ್ ನಿಲ್ದಾಣ ಮಾಡಲು ಹೊರಟಿರುವುದು ಎಷ್ಟು ಸರಿ, ಅಲ್ಲದೆ ಸಭೆಗೆ ತಡವಾಗಿ ಬಂದಿರುವುದಲ್ಲದೆ ಯಾರೋ ನಾಲ್ಕು ಜನ ಹಿಂಬಾಲಕರ ಮಾತು ಕೇಳಿ ಸಂಘಟನೆಯವರನ್ನು ಕೈ ಬಿಟ್ಟು ದಬ್ಬಾಳಿಕೆ ಮಾಡಲು ಹೊರಟಿರುವುದು ಅವರ ಘನತೆಗೆ ತಕ್ಕದಲ್ಲ. ಇವರ ಪುಂಡಾಟಿಗೆ ಗೂಂಡಾಗಿರಿಗೆ ಇಲ್ಲಿ ಹೆದರುವುದಿಲ್ಲ. ಈ ಹಿಂದೆ ಪುಂಡಾಟಿಕೆ ಮಾಡಿದವರಿಗೆ ತಾಲೂಕಿನ ಜನತೆ ಹಾಗು ಸಂಘಟನೆಗಳು ಯಾವ ರೀತಿ ತಕ್ಕ ಶಾಸ್ತಿ ಮಾಡಿದೆ ಎಂಬುವುದನ್ನು ಅರಿಯಬೇಕು. ಯಾರೋ ಬುದ್ಧಿಗೇಡಿ ನಾಲ್ಕು ಜನರನ್ನು ಕರೆದುಕೊಂಡು ಬಂದು ಸಾರ್ವಜನಿಕರ ಹಾಗು ಸಂಘಟನೆಗಳ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ನಾವು ಎಲ್ಲಿ ಉತ್ತರ ಕೊಡಬೇಕು ಗೊತ್ತಿದೆ. ಸಂಘಸಂಸ್ಥೆಗಳ ಜೊತೆ ಹಾಗೂ ಸಾರ್ವಜನಿಕರ ಜೊತೆಯಾದಾಗ ಮಾತ್ರ ಅಭಿವೃದ್ಧಿಯಾಗುತ್ತದೆ. ಯಾರೋ ರಿಯಲ್ ಎಸ್ಟೇಟ್‌ನವರನ್ನು ಕರೆತಂದರೆ ಇದಕ್ಕೆ ಉತ್ತರವನ್ನು ಮುಂದೆ ಕೊಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕರು ಬಂದರೂ ಸಹ ಸಂಘಟನೆಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿದರಲ್ಲದೆ ಅವರ ಸಭೆಯನ್ನು ಬಹಿಷ್ಕರಿಸಿ ಯಾರೂ ಸಹ ಸಂಘಟನೆಯ ಪ್ರಮುಖರು ಹಾಗು ಸಾರ್ವಜನಿಕರು ಸಭೆಗೆ ಹಾಜರಾಗಲಿಲ್ಲ.

ಈ ವೇಳೆ ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್, ಜಯಕರ್ನಾಟಕ ಸಂಘಟನೆಯ ರಾಜು, ಕರವೇ ಪ್ರಧಾನ ಕಾರ್ಯದರ್ಶಿ ಖಾದರ್, ಉಪಾಧ್ಯಕ್ಷ ಅರುಣ್ ಸಿಂಗ್, ಕಾರ್ತಿಕ್, ಪುರಸಭೆ ಸದಸ್ಯ ಜಗದೀಶ್, ವಿಜಯಲಕ್ಷ್ಮೀ, ಮುದ್ದಮ್ಮ, ನರಸಿಂಹಸ್ವಾಮಿ, ಲೋಕೇಶ್, ಮಾಳೆಗೆರೆ ತಾರನಾಥ್‌ ಸೇರಿದಂತೆ ಇತರರು ಇದ್ದರು.

Share this article