ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿಯ ಎದುರು ಮುಖಂಡ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರುಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಬೆಂಗಳೂರಿಗರಿಗೆ ಕುಡಿಯುವ ನೀರು ಕೊಡುವುದಾಗಿ ಸುಳ್ಳು ಹೇಳಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಕಾವೇರಿ ನದಿ ಪಾತ್ರದ ರೈತರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕರು ಜಿಲ್ಲೆಯ ಸಮಸ್ಯೆಗಳನ್ನು ಮುಖ್ಯ ಮಂತ್ರಿಗಳ ಬಳಿ ಹೇಳದೆ ಕೇವಲ ಅವರಿಗೆ ಬಹುಪರಾಕ್ ಎನ್ನುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯಕ್ಕೆ ಬರ ಬಂದಿದೆ. ರೈತರಿಗೆ ಬರ ಪರಿಹಾರ ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ರಾಜ್ಯದ ರೈತರು ಹಾಗೂ ಜನರಿಗೆ ವಿಷ ಕೊಟ್ಟು ಮರಣ ಶಾಸನ ಬರೆದ ಕಾಂಗ್ರೆಸ್ ಸರ್ಕಾರ ಕೆಟ್ಟ ವ್ಯವಸ್ಥೆಗೆ ದೂಡಿದೆ. ಅಣೆಕಟ್ಟೆ ವ್ಯಾಪ್ತಿಯ ಜನ-ಜಾನುವಾರುಗಳು ಸೇರಿದಂತೆ ರೈತರ ತೋಟಗಾರಿಕೆ ಬೆಳೆಗಳಾದ ತೆಂಗಿನ ಮರಗಳು ನೀರು ಇಲ್ಲದೆ ಜೊತೆಗೆ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿಗೆ ನೀರು ಕೊಡಲು ನಮಗೆ ಬೇಸರವಿಲ್ಲ. ಆದರೆ, ಅವರಿಗೂ ಕೊಟ್ಟಂತೆ ನಮ್ಮ ರೈತರಿಗೂ ನೀರು ಹರಿಸಬಹುದು. ಕಾವೇರಿ ಸಮಸ್ಯೆ ಬಂದಾಗ ಹೋರಾಟ ಮಾಡುವುದು ಮಂಡ್ಯ ಜಿಲ್ಲೆಯ ರೈತರು. ಆದರೆ, ಹೆಚ್ಚು ನೀರಿನ ಉಪಯೋಗ ಪಡೆಯುತ್ತಿರುವುದು ಬೆಂಗಳೂರು ಮತ್ತು ಮೈಸೂರು ಜಿಲ್ಲೆಯ ಜನರು. ಆ ಜಿಲ್ಲೆ ಜನರು ಸಹ ನೀರಿನ ಸಮಸ್ಯೆ ತಿಳಿದುಕೊಂಡು ತಮಿಳುನಾಡಿನ ವಿರುದ್ಧ ಹೋರಾಟದಲ್ಲಿ ಭಾಗವಹಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ, ರವಿಲಕ್ಷಣ, ಸುರೇಶ್, ಕೃಷ್ಣ, ಚಾಮರಾಜು, ಕೆಂಪಣ್ಣ ಸೇರಿದಂತೆ ಇತರರು ಇದ್ದರು.