ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಹೊಸದಾಗಿ ಪ್ರಾಧಿಕಾರ ರಚಿಸಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಪದಾಧಿಕಾರಿಗಳು ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.ಚಾಮುಂಡೇಶ್ವರಿ ದರ್ಶನಕ್ಕೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಮೈಸೂರು ಅರಸರ ಸಂಸ್ಥಾನದ ಅದಿದೇವತೆ ತಾಯಿ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಶ್ರದ್ಧಾಭಕ್ತಿಯಿಂದ ಅಭಿವೃದ್ಧಿಪಡಿಸಲಾಗಿದೆ. ದೇವಿಯ ಮಹಾನ್ ಆರಾಧಕರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ದೇವಸ್ಥಾನಕ್ಕೆ ಪೂಜೆ ಮಾಡುವ ಅರ್ಚಕರಿಂದ ಹಿಡಿದು ಎಲ್ಲಾ ವರ್ಗದವರಿಗೂ ಆಗಿನ ಕಾಲದಲ್ಲಿಯೇ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಮಹಾರಾಜರು ಮೈಸೂರು ಅಭಿವೃದ್ಧಿಗಾಗಿ ಆಗಲೇ ಸಾವಿರಾರು ಎಕರೆ ದಾನ ನೀಡಿದ್ದಾರೆ ಎಂದರು.
ದೇವಸ್ಥಾನಗಳು ಮನಃಶಾಂತಿಯ ಸ್ಮಳವಾಗಬೇಕೇ ಹೊರತು, ವ್ಯಾಪಾರ ಸ್ಮಳಗಳಾಗಬಾರದು. ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ 10 ಸಾವಿರ ರೂ., 25 ಸಾವಿರ ರೂ. ಹಾಗೂ 1 ಲಕ್ಷ ರೂ. ನಿಗದಿಪಡಿಸಲು ಉದ್ದೇಶಿಸಿರುವುದು ಅತ್ಯಂತ ಖಂಡನೀಯ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ಈಗ ದೇವರ ಹೆಸರಿನಲ್ಲಿ ಹಗಲು ದರೋಡೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.
ನಗರದಲ್ಲಿ ಚಾಮುಂಡಿಬೆಟ್ಟ ಇರುವುದರಿಂದ ಪ್ರಾಧಿಕಾರದ ಅವಶ್ಯಕತೆಯೇ ಇಲ್ಲ. ಈ ಪ್ರಾಧಿಕಾರ ರಚನೆಯಾದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆದಂತೆ ಹಗರಣಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಈಗಾಗಲೇ ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆ, ಧಾರ್ಮಿಕ ದತ್ತಿಗೆ ಒಳಪಟ್ಟು ಭಕ್ತಾದಿಗಳಿಂದ ಕೋಟ್ಯಂತರ ಆದಾಯ ಬರುತ್ತಿದೆ. ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಈ ಹಣವನ್ನೇ ಸದ್ಬಳಕೆ ಮಾಡಿಕೊಳ್ಳಬೇಕು. ಸ್ಮಾರ್ಟ್ ಕಾರ್ಡ್ನ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಎಂ.ಬಿ. ಪ್ರಭುಶಂಕರ್, ಪ್ರಜೀಶ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ನಾರಾಯಣ ಗೌಡ, ಕುಮಾರ್ ಗೌಡ, ಶಿವಕುಮಾರ್, ವರಕೂಡು ಕೃಷ್ಣಗೌಡ, ಮಂಜುಳಾ, ವಿಜಯೇಂದ್ರ, ಭಾಗ್ಯಮ್ಮ, ರಘು ಅರಸ್, ಎಳನೀರು ರಾಮಣ್ಣ, ಪ್ರದೀಪ, ಗುರು ಮಲ್ಲಪ್ಪ, ಶಂಕರ್ ಗುರು, ಚಂದ್ರಶೇಖರ್, ಶಾಂತಕುಮಾರ್, ರಾಧಾಕೃಷ್ಣ, ತ್ಯಾಗರಾಜ್, ಮಹಾದೇವ, ಸ್ವಾಮಿಗೌಡ, ಕೃಷ್ಣಮೂರ್ತಿ, ವಿಷ್ಣು ಮೊದಲಾದವರು ಇದ್ದರು.