ಕನ್ನಡಪ್ರಭ ವಾರ್ತೆ ಹಾವೇರಿ
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ವಿತರಣೆ ವಿಳಂಬ ಖಂಡಿಸಿ, ಶೀಘ್ರ ಕಿಟ್ ವಿತರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿಯು ಪ್ರತಿಭಟನೆಗೆ ಕರೆ ನೀಡಿದ್ದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯದ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಬೇಕಾದ ಶುಚಿ ಸಂಭ್ರಮ ಕಿಟ್ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಐದಾರು ತಿಂಗಳಿಂದ ನೀಡದೆ ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದನ್ನು ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಶೀಘ್ರವಾಗಿ ಶುಚಿ ಸಂಭ್ರಮ ಕಿಟ್ ವಿತರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನ.೯ ರಂದು ದೇವರಾಜ ಅರಸು ಭವನದ ಎದುರು ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಕಿಟ್ ವಿತರಣಗೆ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಲಿಲ್ಲ. ಪ್ರತಿ ತಿಂಗಳು ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬ್ರಷ್, ಪೆಸ್ಟ್, ಮೈಸೂರು ಸ್ಯಾಂಡಲ್, ೨ ಬಟ್ಟೆ ಸೋಪು, ಕೊಬ್ಬರಿ ಎಣ್ಣೆ, ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಬ್ರಷ್, ಪೆಸ್ಟ್, ಮೈಸೂರು ಸ್ಯಾಂಡಲ್, ೨ ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಪೌಡರ್ ಇರುವ ಶುಚಿ ಸಂಭ್ರಮ ಒಂದು ಕಿಟ್ ವಿತರಣೆ ಮಾಡಲಾಗುತ್ತಿತ್ತು. ಆದರೆ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಐದಾರು ತಿಂಗಳು ಕಳೆದರು ಈವರೆಗೂ ವಿದ್ಯಾರ್ಥಿ ಕಿಟ್ ವಿತರಣೆ ಮಾಡಿಲ್ಲ ಎಂದು ದೂರಿದರು.ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅಭ್ಯಾಸಕ್ಕಾಗಿ ವಸತಿ ನಿಲಯದ ಆಸರೆಯೊಡ್ಡಿ ವಿದ್ಯಾರ್ಥಿಗಳು ಬಂದಿರುತ್ತಾರೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಬೇರೆ ಬೇರೆ ಇಲಾಖೆಗಳ ರೀತಿಯಲ್ಲಿ ವಿಳಂಬ ಮಾಡದೆ ಮುಂಚಿತವಾಗಿ ವಿತರಣೆ ಮಾಡಬೇಕು. ಉತ್ತಮ ಗುಣಮಟ್ಟದ ಸೌಲಭ್ಯ ನೀಡಬೇಕು ಹಾಗೂ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಹಾಸ್ಟೆಲ್ ಮೇಲ್ವಿಚಾರಕರ ಮೂಲಕ ಬಿಸಿಎಂ ಜಿಲ್ಲಾ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಮುಖಂಡರಾದ ಶಿವಪ್ಪ ಪಾಟೀಲ, ಪೃಥ್ವಿ ಬೆಟಗೇರಿ, ಬಸವರಾಜ ಕೋರಿ, ಮಾಲತೇಶ ಕಂಬಳಿ, ಭರತ್ ಮೂಲಿಮನಿ, ಪ್ರವೀಣ್ ಎಲ್., ಹರೀಶ್ ಬಿ.ಆರ್., ಆಕಾಶ ಎಚ್., ಪ್ರಕಾಶ ಲಮಾಣಿ, ಲಕ್ಷ್ಮೀ ಕೆ.ಆರ್., ಸುಮಾ ಡಿ.ಎಸ್., ಭಾಗ್ಯಲಕ್ಷ್ಮೀ ಎಲ್.ಡಿ., ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.