ಗ್ರಾಮಾಂತರ ಠಾಣೆಯಲ್ಲಿ ರೈತ ಸಂಘಕ್ಕೆ ಅಗೌರವ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ರೈತರಿಗೆ ಅಗೌರವ ತರುವ ರೀತಿಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ನಡೆದುಕೊಂಡಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗಳು ರೈತರ ಬಳಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ

ಕನ್ನಡಪ್ರಭ ವಾರ್ತೆ ಸಾಗರ

ಗ್ರಾಮಾಂತರ ಪೊಲೀಸ್ ಠಾಣೆಗೆ ಕಳೆದ ಅ.30ರಂದು ದೂರುದಾರರ ಜೊತೆಗೆ ಹೋಗಿದ್ದ ತಾಲೂಕು ರೈತ ಸಂಘದ ಪದಾಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗಣಪತಪ್ಪ ಸ್ಥಾಪಿತ ತಾಲೂಕು ರೈತ ಸಂಘ ಶುಕ್ರವಾರ ಸಾಗರ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಈಚೆಗೆ ಚಿಕ್ಕನೆಲ್ಲೂರು ಸಂತೋಷ್ ಅಣ್ಣೋಜಿರಾವ್ ಎಂಬವರಿಗೆ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಕೊಡಿಸಲು ರೈತ ಸಂಘ ವತಿಯಿಂದ ಗ್ರಾಮಾಂತರ ಠಾಣೆಗೆ ಹೋಗಲಾಗಿತ್ತು. ಠಾಣೆಗೆ ಹೋಗಿದ್ದಾಗ ಪೊಲೀಸ್ ಅಧಿಕಾರಿಗಳು ರೈತ ಸಂಘದವರೊಂದಿಗೆ ದಬ್ಬಾಳಿಕೆಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.

ರೈತರಿಗೆ ಅಗೌರವ ತರುವ ರೀತಿಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ನಡೆದುಕೊಂಡಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗಳು ರೈತರ ಬಳಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು.

ನಮಗೆ ಯಾರೊಂದಿಗೂ ಸಂಘರ್ಷ ಮಾಡಬೇಕು ಎನ್ನುವ ಉದ್ದೇಶವಿಲ್ಲ. ಆದರೆ, ಜನಪರವಾದ ನಿಲುವಿನಿಂದ ಕಾನೂನು ಪಾಲಿಸಿಯೇ ಇಲಾಖೆಗಳಿಗೆ ಬಂದಾಗ ನಮ್ಮನ್ನು ಅಗೌರವಿಸುವ ಕ್ರಮವನ್ನು ಎಂದೂ ಸಹಿಸುವುದಿಲ್ಲ. ಕ್ಷೇತ್ರದ ಶಾಸಕರೂ ತಮಗೆ ಅನುಕೂಲವಾಗುವ ಅಧಿಕಾರಿಗಳನ್ನು ಇಲಾಖೆಗೆ ಹಾಕಿಸಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸಂಘ ಸಂಸ್ಥೆಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿ, ವ್ಯವಹರಿಸಿದರೆ ರೈತ ಸಂಘ ಬಗ್ಗುವುದಿಲ್ಲ. ನಾವು ನಮ್ಮ ಕೆಲಸ ನಾಲ್ಕು ದಿನ ತಡವಾದರೂ ಚಿಂತೆ ಇಲ್ಲ, ಸಭ್ಯತೆ ಮತ್ತು ಸೌಜನ್ಯತೆ ಅಧಿಕಾರಿಗಳನ್ನು ಹಾಗೂ ಆಡಳಿತವನ್ನು ಬಯಸುತ್ತೇವೆ ಎಂದರು.

ಜಿಲ್ಲಾ ಉಪಾಧ್ಯಕ್ಷ ರಮೇಶ್ ಈ ಕೆಳದಿ, ಪ್ರಧಾನ ಕಾರ್ಯದಶಿ ಹೊಯ್ಸಳ ಗಣಪತಿಯಪ್ಪ, ತಾಲೂಕು ಅಧ್ಯಕ್ಷ ಡಾ. ಎಂ.ಎಲ್. ರಾಮಚಂದ್ರಪ್ಪ, ಕಾರ್ಯದರ್ಶಿ ಬದ್ರೇಶ್ ಬಾಳಗೋಡು ಮತ್ತಿತರ ಪದಾಧಿಕಾರಿಗಳು ಇದ್ದರು.

- - - -17ಕೆಎಸ್‌ಎಜಿ4:

ಸಾಗರ ಡಿವೈಎಸ್‌ಪಿ ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

Share this article