ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Mar 15, 2026, 01:15 AM IST
ಸಿಕೆಬಿ-2  ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ ರಾಜ್ಯ ಬೀಜ ನಿಗಮ ಮಂಡಳಿ ಅಧ್ಯಕ್ಷ ಎಂ.ಆಂಜಿನಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಯಾವುದೇ ದೇಶಗಳ ನಡುವೆ ನಡೆಯುವ ಯುದ್ಧ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಎಲ್ಲ ಸಮಸ್ಯೆಗಳಿಗೂ ಯುದ್ಧವೇ ಪರಿಹಾರವಲ್ಲ. ಮಹಾತ್ಮ ಗಾಂಧೀಜಿ ಅವರು ತಿಳಿಸಿದ ಶಾಂತಿಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಬಿಬಿ ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು ಹಗ್ಗದಿಂದ ಆಟೋ ಎಳೆದು ಅಂಬೇಡ್ಕರ್ ವೃತ್ತದವರೆಗೆ ಸಾಗಿ, ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಬಳಿಕ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೀವ್ರ ಬಿಸಿಲಿನಲ್ಲೇ ರಸ್ತೆಯಲ್ಲೇ ಸೌದೆ ಒಲೆ ಇಟ್ಟು ಅಡುಗೆ ಮಾಡುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ರಾಜ್ಯ ಬೀಜ ನಿಗಮ ಮಂಡಳಿ ಅಧ್ಯಕ್ಷ ಎಂ.ಆಂಜಿನಪ್ಪ ಮಾತನಾಡಿ, ಯಾವುದೇ ದೇಶಗಳ ನಡುವೆ ನಡೆಯುವ ಯುದ್ಧ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಎಲ್ಲ ಸಮಸ್ಯೆಗಳಿಗೂ ಯುದ್ಧವೇ ಪರಿಹಾರವಲ್ಲ. ಮಹಾತ್ಮ ಗಾಂಧೀಜಿ ಅವರು ತಿಳಿಸಿದ ಶಾಂತಿಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಗಾಂಧೀಜಿ ಅವರ ತತ್ವಗಳನ್ನು ನಾವು ವಿಶ್ವಕ್ಕೆ ತಿಳಿಸಬೇಕಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ.

ಇನ್ನಷ್ಟು ದಿನಗಳ ಕಾಲ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆಯಾಗಲಿದೆ. ಇಂಧನ ಬೆಲೆ ಹೆಚ್ಚಳವಾದರೆ ಸರಕು ಸಾಗಣೆ ವೆಚ್ಚ ಅಧಿಕವಾಗಿ ಎಲ್ಲ ಪದಾರ್ಥಗಳು ದುಬಾರಿಯಾಗಲಿವೆ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಯುದ್ಧ ಆರಂಭವಾದರೆ ಪೆಟ್ರೋಲಿಯಂ ಉತ್ಪಗಳ ಕೊರತೆ ಉಂಟಾಗಲಿದೆ ಎಂಬುದು ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಮುನ್ನೆಚ್ಚರಿಕೆ ವಹಿಸಲಿಲ್ಲ.

ಆಡಳಿತ ವೈಫಲ್ಯದಿಂದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ. ಆಡಳಿತ ನಡೆಸಲು ವಿಫಲರಾಗಿರುವ ಮೋದಿ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.ಅದಕ್ಕಾಗಿ ಇಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಪದೇ ಪದೇ ಇಂಧನ ಬೆಲೆಗಳನ್ನು ಏರಿಸುವ ಮೂಲಕ ಮಧ್ಯಮ ವರ್ಗ ಮತ್ತು ಬಡ ಜನರ ಮೇಲೆ ಭಾರೀ ಹೊರೆ ಹಾಕುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ₹350 ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ ಸಾವಿರ ರುಪಾಯಿಗೆ ತಲುಪಿದೆ ಎಂದು ಅವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಪಿ.ಬಚ್ಚೆಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ್ ಅಚ್ಚು, ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ,ಹಿರಿಯ ಕಾಂಗ್ರೆಸ್ ಮುಖಂಡ ಲಾಯರ್ ನಾರಾಯಣಸ್ವಾಮಿ, ಅಡ್ಡಗಲ್ ಶ್ರೀದರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೆಸ್ ಸೂರಿ,ಮಂಗಳಪ್ರಕಾಶ್, ಮಮತಾ ಮೂರ್ತಿ, ವೆಂಕಟರತ್ನ, ವೆಂಕಟಲಕ್ಷ್ಮಿ, ಹೇಮಲತಾ ಜನಾರ್ದನ್,ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್,ನಗರಸಭೆ ಮಾಜಿ ಸದಸ್ಯರಾದ ಎಸ್.ಎಂ. ರಫೀಕ್,ನರಸಿಂಹಮೂರ್ತಿ, ಅಂಬರೀಷ್, ಅಣ್ಣಮ್ಮ, ಸಮ್ಮು,ಶಾಹಿದ್ ಅಬ್ಬಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಮೀಮ್, ಮುಖಂಡರಾದ ಸುಧಾ ವೆಂಕಟೇಶ್, ನಾರಾಯಣಮ್ಮ, ಅರವಿಂದ್, ಉಮೇಶ್ .ಜಿ,ವೆಂಕಟ್, ಪೆದ್ದಣ್ಣ,ವಿನಯ್ ಬಂಗಾರಿ, ಆಜ಼ಂ, ಬಾಬಾ ಜಾನ್, ಮತ್ತಿತರರು ಇದ್ದರು.

ಸಿಕೆಬಿ-2 ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ರಾಜ್ಯ ಬೀಜ ನಿಗಮ ಮಂಡಳಿ ಅಧ್ಯಕ್ಷ ಎಂ.ಆಂಜಿನಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರೀ ದುರಂತ
ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು