ಶಿವಮೊಗ್ಗ: ರೈತರ ಜಮೀನುಗಳ ದಾಖಲೆಗಳನ್ನು ರದ್ದು ಮಾಡಲು ನೋಟಿಸ್ ಕೊಟ್ಟಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಏ.15 ರಂದು ಬೆಳಗ್ಗೆ 10ಕ್ಕೆ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಸೈನ್ಸ್ ಮೈದಾನದಿಂದ ಹೊರಡುವ ಈ ಮೆರವಣಿಗೆ ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ತಲುಪುತ್ತದೆ. ನಂತರ ಅಲ್ಲಿ ಬಹಿರಂಗ ಸಭೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.
ಕೆಲವು ರೈತರು 30-40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದರೂ ಹಕ್ಕುಪತ್ರಗಳನ್ನು ಕೊಟ್ಟಿಲ್ಲ. ಶರಾವತಿ ಮುಳುಗಡೆ ರೈತರು ಮತ್ತು ಇತರೆ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರ ಹೆಸರಿಗೆ ಇಂಡೀಕರಣ ಮಾಡಿಕೊಂಡಿದ್ದಾರೆ. ಸರ್ಕಾರವೇ ಮಂಜೂರು ಮಾಡಿದ ಜಮೀನುಗಳನ್ನು ಅರಣ್ಯ ಇಲಾಖೆಗೆ ಸೇರಿದ್ದು, ಈ ಜಮೀನುಗಳ ದಾಖಲೆಯನ್ನು ವಜಾ ಮಾಡಬೇಕೆಂದು ಉಪವಿಭಾಗ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಉಪವಿಭಾಗ ಅಧಿಕಾರಿಗಳು ರೈತರಿಗೆ ನೋಟಿಸ್‌ನ್ನು ಕೊಡುತ್ತಿದ್ದಾರೆ. ಇದುವರೆಗೂ ನೋಟಿಸ್ ಬಾರದೇ ಇದ್ದ ರೈತರಿಗೂ ಮುಂದೆ ನೋಟಿಸ್ ಬರುತ್ತದೆ. ಇದರಿಂದ ಲಕ್ಷಾಂತರ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅನಾವಶ್ಯಕವಾಗಿ ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.ಸಂವಿಧಾನದಲ್ಲಿ ಭಾರತ ದೇಶದ ಪ್ರತಿಯೊಬ್ಬ ರೈತನಿಗೂ ಜೀವನ ಮಾಡಲು ಸರ್ಕಾರಗಳು ಉದ್ಯೋಗ ದೊರಕಿಸಿ ಕೊಡಬೇಕಾಗಿದೆ. ಸರ್ಕಾರಗಳು ವಿಫಲವಾದಾಗ ಸ್ವಯಂ ರೈತರೇ ಉದ್ಯೋಗ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇವರೆಲ್ಲರೂ ಸಣ್ಣ ಮತ್ತು ಅತೀ ಸಣ್ಣ ರೈತರೆ ಆಗಿದ್ದಾರೆ. ಆದ್ದರಿಂದ ನೋಟಿಸ್ ಕೊಡುವುದನ್ನು ನಿಲ್ಲಿಸಬೇಕು. ನೋಟಿಸ್ ಕೊಟ್ಟಿರುವ ರೈತರ ದಾಖಲೆಗಳನ್ನು ವಜಾ ಮಾಡಬಾರದು. ಬಗರ್‌ಹುಕ್ಕುಂ ಸಾಗವಾಳಿ ಮಾಡಿಕೊಂಡು ಬಂದಿರುವ ರೈತರಿಗೆ ತಕ್ಷಣವೇ ಹಕ್ಕುಪತ್ರ ಕೊಡಬೇಕೆಂದು ಒತ್ತಾಯಿಸಿ ಈ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಬೃಹತ್ ಪ್ರತಿಭಟನೆಗೆ ರೈತರು, ಅರಣ್ಯಹಕ್ಕು ಸಮಿತಿ ರೈತರು, ಎಲ್ಲಾ ಸಹಕಾರಿ ಸಂಘಟನೆಗಳ ಸದಸ್ಯರು, ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ರೈತ ಮಹಿಳೆಯರು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಎಲ್ಲಾ ಸಂಘಟನೆಗಳ ಮುಖಂಡರು, ಯುವಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹನುಮಂತ್, ಚಂದ್ರಪ್ಪ, ಹಾಲೇಶ್, ರಾಜು, ಎಚ್.ಎನ್.ನಾಗರಾಜು, ಹನುಮಂತಪ್ಪ, ಈಟ್ಟೂರು ರಾಜು, ರಫೀಕ್, ಉಮೆಶ್, ಮಹಾದೇವಪ್ಪ, ರುದ್ರೇಶ್ ಮೊದಲಾದವರಿದ್ದರು.