ಕುಷ್ಟಗಿ: ತಾಲೂಕಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸೇವೆಯನ್ನು ಎನ್‌ಜಿಒಗಳಿಗೆ ನೀಡುವುದನ್ನು ವಿರೋಧಿಸಿ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟಿಸಿ, ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ಬಂದು ಸುಮಾರು 22 ವರ್ಷಗಳು ಕಳೆದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮನ್ವಯತೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಶಾಲಾ-ಮಕ್ಕಳಿಗೆ ತಾಜಾ ಆಹಾರ ಸೂಕ್ತ ಸಮಯದಲ್ಲಿ ಶಾಲೆಗಳಲ್ಲಿ ಸಿಗುತ್ತಿದೆ. ಈ ಯೋಜನೆಯಿಂದ ಕೇವಲ ಮಕ್ಕಳಿಗೆ ಊಟ ಅಷ್ಟೇ ಅಲ್ಲದೇ ಲಕ್ಷಾಂತರ ಮಹಿಳಾ ಕಾರ್ಮಿಕರಿಗೆ ಉದ್ಯೋಗ ದೊರೆತಿರುತ್ತದೆ ಎಂದರು.
ಈ ಯೋಜನೆಯಡಿ ರಾಜ್ಯದಲ್ಲಿ ಕೇವಲ ₹3600ರಿಂದ ₹3700 ಸಂಭಾವನೆಗೆ ಮೂಲಭೂತ ಸೌಲಭ್ಯಗಳಿಲ್ಲದೇ ಲಕ್ಷಾಂತರ ಮಹಿಳೆಯರು ರಾಜ್ಯಾದ್ಯಂತ ದುಡಿಯುತ್ತಿದ್ದಾರೆ. ಈ ಉದ್ಯೋಗದಿಂದ ಕುಟುಂಬ ನಿರ್ವಹಣೆ ನಡೆಯುತ್ತಿದೆ. ಈಗಾಗಲೇ ನಿರುದ್ಯೋಗ ತಾಂಡವವಾಡುತ್ತಿದೆ. ಬದುಕಲು ಸಾವಿರಾರು ಕುಟುಂಬ ಕಷ್ಟಪಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಹಿಳೆಯರ ಕೆಲಸ ಕಸಿಯಲು ಸಂಘ-ಸಂಸ್ಥೆಗಳು ಹೊರಟಿದ್ದು ಖಂಡನೀಯ ಎಂದರು.ಜನಪರವಾಗಿ ಕೆಲಸ ಮಾಡಬೇಕಾದ ಕುಷ್ಟಗಿ ಶಾಸಕರು ಖಾಸಗಿಯವರಿಗೆ ನೀಡಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಇದ್ದು, ಇದನ್ನು ನಿಲ್ಲಿಸಬೇಕು ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಶಾಲೆಗಳಲ್ಲಿ ಮೊಟ್ಟೆ ವಿತರಣೆ, ಬಾಳೆಹಣ್ಣು, ರಾಗಿ ಮಾಲ್ಟ್ ಇನ್ನಿತರ ಸೌಲಭ್ಯವನ್ನು ರಾಜ್ಯ ಸರ್ಕಾರ ಈಗಾಗಲೇ ನೀಡುತ್ತಿದೆ. ಯೋಜನೆಯಿಂದ ಮುಖ್ಯ ಗುರುಗಳ ಭಾರ ಕಡಿಮೆ ಮಾಡಲು ಹೆಚ್ಚು ಕಾಳಜಿಯಿಂದ ಸಂಸ್ಥೆಗೆ ನೀಡಬೇಕೆಂದು ಶಿಕ್ಷಕರ ಸಂಘವು ಮನವಿ ನೀಡಿರುವ ಹಿನ್ನೆಲೆಯಲ್ಲಿ ಶಾಸಕರು ಯಾವುದೇ ಯೋಚನೆ ಮಾಡದೆ ಏಕಾಏಕಿ ತೀರ್ಮಾನ ಮಾಡಲು ಹೊರಟಿದ್ದಾರೆ. ಈ ಹಿಂದೆ ಅಡುಗೆ ಸಾದಿಲ್ವಾರು ಲೆಕ್ಕಪತ್ರ, ತರಕಾರಿ ತರುವ ಕೆಲಸ ಎಲ್ಲ ನಿರ್ವಹಣೆಯನ್ನು ಮುಖ್ಯ ಅಡುಗೆಯವರು ಸಮರ್ಪಕವಾಗಿ ನಡೆಸುತ್ತಿದ್ದರು. 2023ರಲ್ಲಿ ಈ ಜವಾಬ್ದಾರಿಯನ್ನು ಮುಖ್ಯ ಅಡುಗೆಯವರಿಂದ ಕಿತ್ತುಕೊಂಡು ಎಸ್‌ಡಿಎಂಸಿಗೆ ಮತ್ತು ಮುಖ್ಯ ಶಿಕ್ಷಕರಿಗೆ ನೀಡಿದೆ ಎಂದರು.ಶಾಸಕರು ಸಮಸ್ಯೆ ಬಗೆಹರಿಸುವ ಬದಲು 22 ವರ್ಷಗಳಿಂದ ಕೆಲಸ ನಿರ್ವಹಿಸಿ ಬದುಕು ಕಟ್ಟಿಕೊಂಡಿರುವ ಈ ಮಹಿಳೆಯರ ಬದುಕು ನಾಶ ಮಾಡಲು ಹೊರಟಿರುವ ಕ್ರಮ ಖಂಡಿಸುತ್ತಿದ್ದು, ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದರು.
ಸಂಘಟನೆಯ ಮುಖಂಡರಾದ ಲಕ್ಷ್ಮೀದೇವಿ, ಹಲೀಮಾ, ಅನ್ನಪೂರ್ಣಾ, ಚಂದ್ರಕಲಾ, ಶಾಂತಮ್ಮ ಪತ್ತಾರ, ಹನುಮಂತ ನೀರಲೂಟಿ, ಮಲ್ಲೇಶಗೌಡ, ನಿರುಪಾದಿ, ಕಾಸೀಮ ಸರ್ದಾರ, ಆರ್.ಕೆ. ದೇಸಾಯಿ, ರಂಗಪ್ಪ ದೇವಲಾಪುರ, ಕಲಾವತಿ ಮೆಣೇದಾಳ, ರೇಣುಕಾ, ಗಂಗಮ್ಮ, ಲಕ್ಷ್ಮೀದೇವಿ, ದೊಡ್ಡನಗೌಡ, ಶಿವನಗೌಡ ಪಾಟೀಲ, ಇತರರು ಇದ್ದರು.ಪ್ರತಿಭಟನಾ ಸ್ಥಳಕ್ಕೆ ಶಾಸಕ ಭೇಟಿ: ಶಾಸಕ ದೊಡ್ಡನಗೌಡ ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಬಿಸಿಯೂಟ ಯೋಜನೆಯನ್ನು ಎನ್‌ಜಿಒಗೆ ವಹಿಸುವ ಕುರಿತು ಅಡುಗೆದಾರರ ಸಂಘಟನೆ ಹಾಗೂ ತಾಪಂ ಅಧಿಕಾರಿಗಳು, ಶಿಕ್ಷಕರ ಸಂಘದ ಸಭೆ ನಡೆಸುವ ಮೂಲಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.