ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ನಡೆಸಿ ರೈತ ಚಳವಳಿ ರೂಪುರೇಖೆಗಳ ಬಗ್ಗೆ ಚರ್ಚಿಸಿದ ರೈತ ಮುಖಂಡರು ಈ ಕುರಿತ ಕರಪತ್ರ ಬಿಡುಗಡೆ ಮಾಡಿದ ನಂತರ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಈ ಹಿಂದೆ ರೈತಸಂಘ 109 ದಿನ ಹಗಲು-ರಾತ್ರಿ ಬೀದಿ ಹೋರಾಟ ನಡೆಸಿದ ಫಲವಾಗಿ ರೈತರ ಪ್ರತಿ ಟನ್ ಕಬ್ಬಿಗೆ ಸರ್ಕಾರದ ವತಿಯಿಂದ 50 ರು. ಮತ್ತು ಕಾರ್ಖಾನೆ ವತಿಯಿಂದ 50 ರು. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಯಿತು ಎಂದರು.
ಸರ್ಕಾರದ ಮಟ್ಟದಲ್ಲಿ ನಿರ್ಧರಿತವಾದ ತೀರ್ಮಾನ ಜಾರಿಗೊಳಿಸುವಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದ ವಿರುದ್ಧ ಕೆಲವು ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ವೇಳೆ ರಾಜ್ಯ ಸರ್ಕಾರ ರೈತರ ನೆರವಿಗೆ ಬರಲ್ಲಿಲ್ಲ. ಆದರೆ, ರೈತ ಸಂಘಟನೆ ಕಾರ್ಖಾನೆಗಳ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಿದಾಗ ಕೆಲವು ವಕೀಲರು ತೀರ್ಪು ರೈತರ ಪರ ಬರುವಂತೆ ನೋಡಿಕೊಂಡರು ಎಂದರು.ನ್ಯಾಯಾಲಯದ ಆದೇಶ ಹಿಡಿದು ರೈತಸಂಘ ಅಂದಿನ ರಾಜ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲರ ಜೊತೆ ಸಭೆ ನಡೆಸಿ ರಾಜ್ಯ ಸರ್ಕಾರ ಮತ್ತು ಕಾರ್ಖಾನೆಗಳ ಮೂಲಕ ರೈತರ ಪ್ರತಿ ಟನ್‌ಗೆ ನೀಡಬೇಕಾದ ಹಿಂಬಾಕಿ ಹಣವನ್ನು ನೀಡುವಂತೆ ಆಗ್ರಹಿಸಲಾಗಿತ್ತು. ಸರ್ಕಾರ ತಾನು ನೀಡಬೇಕಾದ 50 ರು. ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ ಎಂದರು.
ರೈತರ ಪಾಲಿನ ಹಣ ನೀಡಲು ಸಕ್ಕರೆ ಕಾರ್ಖಾನೆ ತಡಯಾಜ್ಞೆ ತಂದಿದ್ದರೂ ಸರ್ಕಾರ ಇದನ್ನು ತೆರವುಗೊಳಿಸಿ ರೈತರ ನೆರವಿಗೆ ಮುಂದಾಗಿಲ್ಲ. ಹೇಮಗಿರಿ ಸಕ್ಕರೆ ಕಾರ್ಖಾನೆ ತಾನು ತಂದಿರುವ ತಡೆಯಾಜ್ಞೆಯನ್ನು ಹಿಂಪಡೆಯಬೇಕು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. 50 ರು. ಪ್ರೋತ್ಸಾಹ ಧನ ಪಾವತಿಸಿದ ನಂತರವೇ ಕಾರ್ಖಾನೆ ಪ್ರಸಕ್ತ ಸಾಲಿನ ತನ್ನ ಕಬ್ಬು ಅರೆಯುವಿಕೆಯ ಕಾರ್ಯ ಆರಂಭಿಸಬೇಕು. ತಪ್ಪಿದಲ್ಲಿ ಕಾರ್ಖಾನೆಯಲ್ಲಿ ಕಬ್ಬು ಅರೆವಿಕೆಗೆ ರೈತಸಂಘ ತಡೆಯೊಡ್ಡಲಿದೆ ಎಂದು ಎಚ್ಚರಿಸಿದರು.