ಕೇಂದ್ರ ಗೃಹ ಮಂತ್ರಿಯವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿ ಅವರು ದಲಿತ ವಿರೋಧಿ, ಅಂಬೇಡ್ಕರ ವಿರೋಧಿ ಎಂದು ತಮ್ಮನ್ನು ತಾವು ತೋರಿಸಿಕೊಟ್ಟಿದ್ದಾರೆ
ಗದಗ: ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಡಾ. ಬಿ.ಆರ್.ಅಂಬೇಡ್ಕರ ವಿರೋಧಿ ಹೇಳಿಕೆ ಖಂಡಿಸಿ ದಸಂಸ ಒಕ್ಕೂಟ, ದಲಿತ ಪ್ರಗತಿಪರ ಸಂಘಟನೆಗಳಿಂದ ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ದಲಿತ ಮುಖಂಡ ಬಸವರಾಜ ಎಂ. ಕಡೇಮನಿ ಮಾತನಾಡಿ, ಗೃಹ ಮಂತ್ರಿ ಅಮಿತ್ ಶಾ ಸಂವಿಧಾನ ಕುರಿತ ಚರ್ಚೆ ವೇಳೆ ಡಾ. ಅಂಬೇಡ್ಕರ್ ಬಗ್ಗೆ ಜಪ ಮಾಡದೇ ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂದು ಅಂಬೇಡ್ಕರ್ ಬಗ್ಗೆ ಅವಹೇಳನವಾಗಿ ಮಾತನಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇನೆ. ಸೂರ್ಯ ಚಂದ್ರ ಇರುವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ರಕ್ತಪಾತವಾದರೂ ಸರಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರೀಫ ಬಿಳಿಯಲಿ ಮಾತನಾಡಿ, ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಗದಗ ಬಂದ್ ಗೆ ಕರೆ ನೀಡಲಾಗುವುದು ಎಂದರು.
ರಮೇಶ ಚಲವಾದಿ ಮಾತನಾಡಿ, ಕೇಂದ್ರ ಗೃಹ ಮಂತ್ರಿಯವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿ ಅವರು ದಲಿತ ವಿರೋಧಿ, ಅಂಬೇಡ್ಕರ ವಿರೋಧಿ ಎಂದು ತಮ್ಮನ್ನು ತಾವು ತೋರಿಸಿಕೊಟ್ಟಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಅಶೋಕ ಬರಗುಂಡಿ ಮಾತನಾಡಿ, ಅಂಬೇಡ್ಕರ ಎಂದರೆ ಜ್ಞಾನ, ಅಂಬೇಡ್ಕರ ಅಂದರೆ ಸಮಾನತೆ, ಸಮಾಜದ ಎಲ್ಲರಿಗೂ ಸಮಾನತೆಯ ಸಂವಿಧಾನ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡುವ ಯೋಗ್ಯತೆ ಅಮಿತ್ ಶಾಗೆ ಇಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.