ನಗರಸಭೆ ಅಧಿಕಾರಿಗಳ ಮೇಲೆ ನಿಯಮಬಾಹಿರ ಒತ್ತಡ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Aug 29, 2024, 12:49 AM IST
ಸ | Kannada Prabha

ಸಾರಾಂಶ

ಲಭ್ಯವಿರುವ ಪೌರ ಕಾರ್ಮಿಕರಲ್ಲಿ 35 ವಾರ್ಡ್‌ಗಳಲ್ಲಿ ದಿನ ನಿತ್ಯ ಸ್ವಚ್ಛತೆ ಸೇವೆ ನಿರ್ವಹಿಸಲಾಗುತ್ತಿದೆ.

ಹೊಸಪೇಟೆ: ನಗರಸಭೆ ಅಧಿಕಾರಿಗಳು ಹಾಗೂ ನೌಕರರ ಮೇಲೆ ಅನವಶ್ಯಕ, ನಿಯಮಬಾಹಿರ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿ ರಾಜ್ಯ ಪೌರ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಗರ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದೆ. ಸುಮಾರು ಮೂರು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ನಗರಸಭೆಯಲ್ಲಿ ಕಂದಾಯ ಶಾಖೆಯಲ್ಲಿ ಆಸ್ತಿ ಹಕ್ಕು ವರ್ಗಾವಣೆ, ಇ-ಆಸ್ತಿ ಹೊಸ ಹಾಗೂ ನವೀಕರಣ, ತಿದ್ದುಪಡಿ ಮತ್ತು ಎಸ್.ಎ.ಎಸ್, ನೀರಿನ ಶುಲ್ಕ ವಸೂಲಾತಿ ಸೇರಿದಂತೆ ಇತರೆ ಸೇವೆಗಳನ್ನು ಸಲ್ಲಿಸಲಾಗುತ್ತಿದೆ. ನಗರಸಭೆಯ ಕೆಲ ಜನ ಪ್ರತಿನಿಧಿಗಳು, ಅವರ ಕುಟುಂಬ ವರ್ಗದವರು, ಕೆಲ ಮಹಿಳಾ ಜನಪ್ರತಿನಿಧಿಗಳ ಪತಿಗಳು, ಅವರ ಪಿಎಗಳು ಹಾಗೂ ಮಧ್ಯವರ್ತಿಗಳಿಂದ ಅನಧಿಕೃತ ಬಡಾವಣೆಗಳಿಗೆ ಫಾರಂ-3 ನೀಡುವಂತೆ ಒತ್ತಾಯಿಸಲಾಗುತ್ತಿದೆ. ನಿಯಮ ಬಾಹಿರವಾಗಿ ಒತ್ತಡ ಹಾಕಲಾಗುತ್ತಿದೆ. ಕಚೇರಿ ಕರ್ತವ್ಯಗಳ ಸಮರ್ಪಕ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.

ಲಭ್ಯವಿರುವ ಪೌರ ಕಾರ್ಮಿಕರಲ್ಲಿ 35 ವಾರ್ಡ್‌ಗಳಲ್ಲಿ ದಿನ ನಿತ್ಯ ಸ್ವಚ್ಛತೆ ಸೇವೆ ನಿರ್ವಹಿಸಲಾಗುತ್ತಿದೆ. ಆದರೂ ಕೆಲ ಜನಪ್ರತಿನಿ಼ಧಿಗಳಿಗೆ ನೌಕರರಿಗೆ, ಪೌರ ಕಾರ್ಮಿಕರಿಗೆ, ಮೇಲ್ವಿಚಾರಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಲಾಗುತ್ತಿದೆ. ಮೇಲಧಿಕಾರಿಗಳ ಮೇಲೂ ಇಲ್ಲಸಲ್ಲದ ದೂರು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಹಿಂದೆ ನಿಯಮ ಬಾಹಿರ ಕೃತ್ಯಗಳಿಂದ ಪಾರ್ಕ್‌ಗಳು, ನಿವೇಶನಗಳು, ಸರ್ಕಾರದ ಜಮೀನುಗಳು, ಹಳ್ಳದ ಅಕ್ಕ-ಪಕ್ಕದ ಬಫರ್ ಝೋನ್‌ಗಳು ಇತ್ಯಾದಿ ಜಾಗಗಳನ್ನು ನೌಕರರ ಮೇಲೆ ಒತ್ತಡ ಹೇರಿ, ದಾಖಲಾತಿ ಸೃಷ್ಟಿಸಿಕೊಂಡಂತಹ ಪ್ರಕರಣಗಳು ನಡೆದಿವೆ. ಸರ್ಕಾರಕ್ಕೆ ಕೋಟ್ಯಂತರ ರು. ಬೆಲೆ ಬಾಳುವ ಆಸ್ತಿಗಳು ನಷ್ಟವಾಗಿವೆ. ಈ ವಿಷಯವಾಗಿ ವಿವಿಧ ನ್ಯಾಯಾಲಯ ಮತ್ತು ಪ್ರಾಧಿಕಾರಗಳಲ್ಲಿ ವಿಚಾರಣೆಗಳು ನಡೆಯುತ್ತಿವೆ. ಅನೇಕ ನೌಕರರುಗಳ ಮೇಲೆ ಈ ಬಗ್ಗೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದರು.

ನಿಯಮಬಾಹಿರವಾಗಿ ಕಂದಾಯ ಶಾಖೆ, ತಾಂತ್ರಿಕ ವಿಭಾಗ ಹಾಗೂ ಆರೋಗ್ಯ ಶಾಖೆ ಸೇರಿದಂತೆ ಇತರೆ ವಿಭಾಗಗಳಲ್ಲಿ ಅನಗತ್ಯ ನಿಯಮ ಬಾಹಿರಕ್ಕೆ ಅವಕಾಶ ನೀಡಬಾರದು. ನಗರಸಭೆಯ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಸಾರ್ವಜನಿಕ ಸೇವೆ ಸಲ್ಲಿಸಲು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಪೌರಾಯುಕ್ತ ಚಂದ್ರಪ್ಪ, ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ, ಪದಾಧಿಕಾರಿಗಳಾದ ಜಿ. ನೀಲಕಂಠಸ್ವಾಮಿ, ಸುಂಕಪ್ಪ, ಅಧಿಕಾರಿಗಳಾದ ಆರತಿ, ರವಿಕುಮಾರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿತ್ವ ರೂಪಿಸುವುದೇ ಮನೆಗೊಂದು ಗ್ರಂಥಾಲಯದ ಉದ್ದೇಶ-ಡಾ. ಮಾನಸ
ಲೋಕಾ ದಾಳಿಗೆ ಹೆದರಿ ಬಾತ್‌ರೂಂನಲ್ಲಿ ಹಣ ಪ್ಲಶ್‌ ಮಾಡಿದ ಅಧಿಕಾರಿ