ಕನ್ನಡಪ್ರಭ ವಾರ್ತೆ ಖಾನಾಪುರ
ಬಸ್‌ಗಳು ತಡವಾಗಿ ಚಲಿಸುವುದು, ನಿಗದಿತ ಸ್ಥಳಗಳಲ್ಲಿ ನಿಲ್ಲದಿರುವುದು, ಬಸ್ ನಿಲ್ದಾಣದ ಅವ್ಯವಸ್ಥೆ ಸೇರಿದಂತೆ ತಾಲೂಕಿನ ಅಸರ್ಮಪಕ ಸಾರಿಗೆ ವ್ಯವಸ್ಥೆ ಆಕ್ರೋಶಗೊಮಡ ಕರ್ನಾಟಕ ಯುವ ರಕ್ಷಣಾವೇದಿಕೆಯ ಪದಾಧಿಕಾರಿಗಳು ಮಂಗಳವಾರ ಪಟ್ಟಣದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಗೂಳಣ್ಣವರ, ಸ್ಥಳೀಯ ಬಸ್ ನಿಲ್ದಾಣದಲ್ಲಿ ವೇಳಾಪಟ್ಟಿ ಅಳವಡಿಸಿಲ್ಲ, ಸಿ.ಸಿ ಕ್ಯಾಮೆರಾ ಇಲ್ಲ, ಬಸ್‌ಗಳು ವೇಳಾಪಟ್ಟಿಯಂತೆ ಚಲಿಸುತ್ತಿಲ್ಲ. ನಿಲ್ದಾಣ ಅಧೀಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೂ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತಿದೆ. ಖಾನಾಪುರ ಘಟಕದಲ್ಲಿರುವ ಈಗಾಗಲೇ 15 ಲಕ್ಷ ಕಿಮೀ ಓಡಿರುವ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ. ಈ ಬಸ್‌ಗಳು ಮೇಲಿಂದ ಮೇಲೆ ಕೆಟ್ಟು ನಿಲ್ಲುತ್ತಿವೆ, ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿತ್ಯ ಪಟ್ಟಣದಿಂದ ಬೆಳಗಾವಿಗೆ ವಿದ್ಯಾರ್ಥಿಗಳು, ನೌಕರಸ್ಥರು, ಕಾರ್ಮಿಕರು ಸೇರಿದಂತೆ ಸಾವಿರಾರು ಜನ ಪ್ರಯಾಣಿಸುತ್ತಿದ್ದು, ಖಾನಾಪುರ-ಬೆಳಗಾವಿ ಮಾರ್ಗದಲ್ಲಿ ಪ್ರತಿದಿನ ಮುಂಜಾನೆ 7 ರಿಂದ 10 ಮತ್ತು ಸಂಜೆ 5 ರಿಂದ 8ರ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೆ ಒಂದರಂತೆ ಬಸ್ ಓಡಿಸಬೇಕು. ತಾಲೂಕಿನ ಲೋಂಡಾ ಗ್ರಾಮದ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ನೇಮಕ ಮಾಡಬೇಕು, ಹಲಸಾಲ ಗ್ರಾಮಕ್ಕೆ ಸರಿಯಾದ ವೇಳೆಯಲ್ಲಿ ಬಸ್ ಓಡಿಸಬೇಕು. ಪಟ್ಟಣದ ಹೊಸ ಬಸ್ ನಿಲ್ದಾಣಕ್ಕೆ ಬರುವ ಎಲ್ಲ ಬಸ್‌ಗಳು ಹಳೆಯ ನಿಲ್ದಾಣಕ್ಕೆ ಬಂದುಹೋಗಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ನಡೆಸಲಾಗಿದೆ. ಒಂದು ವಾರದಲ್ಲಿ ಈ ಸಮಸ್ಯೆಗಳು ಬಗೆಹರೆಯದಿದ್ದಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ಪ್ರತಿಭಟನೆಯ ಅಂಗವಾಗಿ ಅರ್ಧ ಗಂಟೆಗಳ ಕಾಲ ರಸ್ತೆತಡೆ ನಡೆಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವಾಯುವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವರಾಜ ಶೆಂಡೂರಿ, ಸುಭಾಸ ಪುರೋಹಿತ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.