ಓಕೆ...ಜಮೀನು ಒತ್ತುವರಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Oct 09, 2023, 12:45 AM IST
ಫೋಟೋ 8ಪಿವಿಡಿ3ಪಟ್ಟಣದ ಎಪಿಎಂಸಿ ಹಿಂಬಾಗದಲ್ಲಿ ಉದ್ಯಮಿಯೊಬ್ಬರು ಲೇ ಔಟ್‌ ನಿರ್ಮಿಸುವ ಹಿನ್ನಲೆಯಲ್ಲಿ ಎಸ್‌ಸಿ ಫಲಾನುಭವಿಯಿಂದ ಜಮೀನು ಕಬಳಿಕೆ ಹಾಗೂ ಬೆಟ್ಟದ ಬುಡ್ಡದಲ್ಲಿ ಬಡವರ ನಿವೇಶನಕ್ಕೆ ಮೀಸಲಿದ್ದ ಸರ್ಕಾರಿ ಜಮೀನು ಒತ್ತುವರಿ ವಿರೋಧಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ಕಾಮಗಾರಿಗೆ ತಡೆಹಿಡಿದರು.      | Kannada Prabha

ಸಾರಾಂಶ

ನಿಯಮಬಾಹಿರವಾಗಿ ಪರಿಶಿಷ್ಟ ಜಾತಿಗೆ ಸೇರಿದ್ದ ಫಲಾನುಭವಿಯ ಜಮೀನು ಖರೀದಿ, ಒತ್ತುವರಿ ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಕಾಮಗಾರಿಗೆ ತಡೆಯೊಡ್ಡಿದರು.

ಪಾವಗಡ: ಕರ್ಮಷಿಯಲ್‌ ಲೇ ಔಟ್‌ ನಿರ್ಮಿಸುವ ಉದ್ದೇಶದ ಸಲುವಾಗಿ ಪ್ರಭಾವಿ ಉದ್ಯಮಿಯೊಬ್ಬರು ನಿಯಮ ಬಾಹಿರವಾಗಿ ಪರಿಶಿಷ್ಟ ಜಾತಿಗೆ ಸೇರಿದ್ದ ಫಲಾನುಭವಿಯ ಜಮೀನು ಖರೀದಿಸಿದ್ದಲ್ಲದೇ, ಇದರ ಜತೆಗೆ ಜಮೀನು ಪಕ್ಕದಲ್ಲಿಯೇ ಸುಮಾರು ಒಂದು ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿರುವ ಪರಿಣಾಮ ಬಡವರ ನಿವೇಶನಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಕೆಲ ದಲಿತ ಸಂಘಟನೆಗಳ ಮುಖಂಡರು ಕಾಮಗಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ಕೃಷಿ ಉತ್ಪನ್ನ ಮಾರುಕಟ್ಟೆಯ ಹಿಂಭಾಗದಲ್ಲಿ ನಡೆದಿದೆ. ಈ ವೇಳೆ ದಲಿತ ಮುಖಂಡ ಅಪ್‌ಬಂಡೆ ಗೋಪಾಲ್‌ ಮಾತನಾಡಿ, ಪಟ್ಟಣದ ವಾಸಿ ಪರಿಶಿಷ್ಟ ಜಾತಿಗೆ ಸೇರಿದ್ದ ನರಸಪ್ಪ ಎಂಬುವರಿಗೆ ಪಟ್ಟಣದ 144ಸರ್ವೆ ನಂಬರಿನಲ್ಲಿ ಎಸ್‌ಸಿ, ಎಸ್‌ಟಿ ನಿಗಮದಿಂದ ಇಲ್ಲಿನ ಎಪಿಎಂಸಿ ಹಿಂಬಾಗದಲ್ಲಿ ಎರಡು ಎಕರೆ ಜಮೀನು ಮಂಜೂರಾತಿಯಾಗಿದೆ. ಈ ಜಮೀನು ಉಳುಮೆಯಿಂದ ಆತ ಜೀವನ ಸಾಗಿಸುತ್ತಿದ್ದ. ಜಮೀನು ಮಾಲೀಕ ನರಸಪ್ಪನಿಗೆ ಯಾಮಾರಿಸಿ, ಸರ್ಕಾರದ ಆದೇಶ ಉಲ್ಲಾಂಘಿಸಿದ ಉದ್ಯಮಿಯೊಬ್ಬರು ಮಾಲೀಕ ನರಸಪ್ಪನಿಂದ ಎಕರೆ ಜಮೀನು ಖರೀಸಿದ್ದು ಅದನ್ನು ನೋಂದಣಿ ಕಚೇರಿಯಲ್ಲಿ ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ ಎಂದರು. ಅಲ್ಲದೇ ಇದೇ ಜಮೀನಿನ ಪಕ್ಕದ ಬೆಟ್ಟದ ಬುಡದಲ್ಲಿ ಬಡವರ ಮನೆಗಳ ನಿರ್ಮಾಣಕ್ಕೆ ಮೀಸಲಿದ್ದ ಸುಮಾರು ಒಂದು ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿ, ಲೇ ಔಟ್‌ ನಿರ್ಮಿಸುವ ಸಲುವಾಗಿ ಜೆಸಿಬಿಯಿಂದ ಒತ್ತುವರಿ ಕಾಮಗಾರಿ ನಿರ್ವಹಣೆ ಕೈಗೊಂಡಿದ್ದಾರೆ. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡರೆ ಬಡವರಿಗೆ ವಸತಿ ಸೌಲಭ್ಯಕ್ಕೆ ನಿವೇಶನದ ಕೊರತೆ ಎದುರಾಗಲಿದೆ. ಪರಿಸರ ನಾಶದಿಂದ ಪ್ರಾಣಿಪಕ್ಷಿಗಳಿಗೆ ತೊಂದರೆ ಹಾಗೂ ಇತರೆ ಹಲವು ಸಮಸ್ಯೆ ಎದುರಾಗಲಿದೆ. ಹೀಗಾಗಿ ಸರ್ಕಾರಿ ಜಮೀನು ಒತ್ತುವರಿ ಕಾಮಗಾರಿ ಸ್ಥಗಿತಗೊಳಿಸುವಂತೆ ತಹಸೀಲ್ದಾರ್‌ರಿಗೆ ದೂರು ಸಲ್ಲಿಸಲಾಗಿದೆ. ದಾಖಲೆ ಪ್ರಕಾರ ತಹಸೀಲ್ದಾರ್‌ ಪರಿಶೀಲನೆ ನಡೆಸಿದ ಬಳಿಕ ಕೆಲಸ ಮುಂದುವರಿಸಲಿ, ಅಲ್ಲಿಯವರೆಗೆ ಜೆಸಿಬಿಯಿಂದ ಕಾಮಗಾರಿ ನಡೆಸದಂತೆ ತಡೆಯೊಡ್ಡಿರುವುದಾಗಿ ಹೇಳಿದರು. ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕ ಕಡಪಲಕರೆ ಪಿ.ಹನುಮಂತರಾಯಪ್ಪ ಮಾತನಾಡಿ ಸರ್ಕಾರಿ ಜಮೀನು ಕಬಳಿಕೆಗೆ ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ, ಇದರಿಂದ ಬಡವರ ನಿವೇಶನಗಳಿಗೆ ಆನ್ಯಾಯ ಆಗಲಿದೆ. ಕೂಡಲೇ ಇಂತಹ ಕಾಮಗಾರಿ ಸ್ಥಗಿತಗೊಳಿಸಿ ನಿರ್ಗತಿಕರಿಗೆ ನಿವೇಶನ ಹಂಚಿವಂತೆ ತಹಸೀಲ್ದಾರ್‌ಗೆ ಒತ್ತಾಯಿಸಿದರು. ದಲಿತ ಮುಖಂಡರಾದ ಕನ್ನಮೇಡಿ ಎಸ್‌.ಹನುಮಂತರಾಯಪ್ಪ, ಕೃಷ್ಣಮೂರ್ತಿ, ಕಡಮಲಕುಂಟೆ ಸುಬ್ಬರಾಯಪ್ಪ, ಕಡಪಲಕರೆ ನರಸಿಂಹಪ್ಪ, ಪಳವಳ್ಳಿ ಗೋವಿಂದಪ್ಪ, ಸೂಲನಾಯಕನಹಳ್ಳಿ ಅನಿಲ್‌ಕುಮಾರ್‌, ಘರನಾ ನಾಗಪ್ಪ, ಇತರೆ ಆನೇಕ ಮಂದಿ ದಲಿತ ಮುಖಂಡರು ಸರ್ಕಾರಿ ಜಮೀನು ಕಬಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿ ತೆಡೆದರು. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ನಿರೀಕ್ಷಕ (ಆರ್‌ಐ)ರಾಜ್‌ ಗೋಪಾಲ್‌ , ಗ್ರಾಮಲೆಕ್ಕಾಧಿಕಾರಿ ರಾಜೇಶ್‌ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಕಾಮಗಾರಿ ಸ್ಥಗಿತಗೊಳಿಸುವಂತೆ ಉದ್ಯಮಿಗೆ ತಿಳಿಸಿದ್ದು ಇಲಾಖೆಯ ಅಧಿಕಾರಿಗಳಿಂದ ಜಮೀನು ಸರ್ವೆ ಮಾಡಿಸಿದ ಬಳಿಕ ನಿಯಮನುಸಾರ ಕಾಮಗಾರಿ ನಿರ್ವಹಿಸುವಂತೆ ಆರ್‌ಐ ಸೂಚಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ