ನಾಳೆ ಮಂಡ್ಯ ನಗರಸಭೆ, ಕೆಎಚ್‌ಬಿ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : May 16, 2025, 01:49 AM IST
೧೫ಕೆಎಂಎನ್‌ಡಿ-೧ಮಂಡ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕೆಎಚ್‌ಬಿ ಮಹಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹರೀಶ್ ಬಾಣಸವಾಡಿ ಮಾತನಾಡಿದರು. | Kannada Prabha

ಸಾರಾಂಶ

ಕೆಎಚ್‌ಬಿ ಬಡಾವಣೆಯಲ್ಲಿ ಸುಮಾರು ೫೦೦ ಕುಟುಂಬಗಳು ವಾಸ ಮಾಡುತ್ತಿದ್ದು, ಬಡಾವಣೆಗೆ ಈವರೆವಿಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಜಲ ಮಂಡಳಿಯವರು ಯೋಜನೆ ರೂಪಿಸಿದ್ದು, ೩.೫೦ ಕೋಟಿ ರು. ಪಾವತಿಸಿದರೆ ಕಾವೇರಿ ನೀರು ಒದಗಿಸುವುದಾಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಎಚ್‌ಬಿ ಬಡಾವಣೆಗೆ ಮೂಲಸೌಲಭ್ಯವನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ನಗರಸಭೆ ಮತ್ತು ಗೃಹಮಂಡಳಿ ವಿರುದ್ಧ ಮೇ ೧೭ರಂದು ಖಾಲಿ ಕೊಡ ಪ್ರದರ್ಶನ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕೆಎಚ್‌ಬಿ ಮಹಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹರೀಶ್ ಬಾಣಸವಾಡಿ ತಿಳಿಸಿದರು.

ಅಂದು ಬಡಾವಣೆಯ ನಿವಾಸಿಗಳು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಡಾವಣೆಯಲ್ಲಿ ಸುಮಾರು ೫೦೦ ಕುಟುಂಬಗಳು ವಾಸ ಮಾಡುತ್ತಿದ್ದು, ಬಡಾವಣೆಗೆ ಈವರೆವಿಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಜಲ ಮಂಡಳಿಯವರು ಯೋಜನೆ ರೂಪಿಸಿದ್ದು, ೩.೫೦ ಕೋಟಿ ರು. ಪಾವತಿಸಿದರೆ ಕಾವೇರಿ ನೀರು ಒದಗಿಸುವುದಾಗಿ ತಿಳಿಸಿದ್ದಾರೆ. ಆದರೆ, ಕೆಎಚ್‌ಬಿಯವರು ನಗರಸಭೆಗೆ ಹಸ್ತಾಂತರ ಮಾಡಿದ್ದೇವೆ. ನಾವು ಕೊಡುವುದಿಲ್ಲ ಎನ್ನುತ್ತಾರೆ. ನಗರಸಭೆಯವರು ಕೋಟ್ಯಂತರ ರು. ಹಣ ಪಡೆದು ಹಸ್ತಾಂತರ ಮಾಡಿಕೊಂಡಿದ್ದು, ಈಗ ಕೆಎಚ್‌ಬಿಯವರು ನೀಡಿರುವ ಹಣದಲ್ಲಿ ಒಂದು ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗದು. ಹೀಗಾಗಿ ಬಡಾವಣೆಯನ್ನು ಕೆಎಚ್‌ಬಿಗೆ ವಾಪಸ್ ನೀಡುವ ನಿರ್ಣಯ ಕೈಗೊಂಡಿದ್ದಾರೆ. ಈ ಎರಡೂ ಸಂಸ್ಥೆಗಳ ಆಡಳಿತದ ವೈಫಲ್ಯದಿಂದಾಗಿ ನಿವಾಸಿಗಳಾದ ನಾವು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಬಡಾವಣೆಯ ನಿವಾಸಿಗಳು ನಗರಸಭೆಗೆ ಕಂದಾಯ ಪಾವತಿ ಮಾಡುತ್ತಿದ್ದೇವೆ. ಕಂದಾಯ ಪಾವತಿ ಮಾಡಿಸಿಕೊಳ್ಳುವ ನಗರಸಭೆಯವರು ನಮಗೆ ಮೂಲಸೌಕರ್ಯ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಗೃಹಮಂಡಳಿ ಹಾಗೂ ನಗರಸಭೆಯ ವೈಫಲ್ಯ ಖಂಡಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಮಗೆ ಮುಖ್ಯವಾಗಿ ಕಾವೇರಿ ನೀರು ಸರಬರಾಜು ಮಾಡಬೇಕು. ಒಳಚರಂಡಿ ಸರಿಪಡಿಸಬೇಕು, ರಸ್ತೆ ದುರಸ್ಥಿ ಮಾಡುವುದು ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಶ್ರೀಕಾಂತ್, ಪುಟ್ಟಯ್ಯ, ಅಶೋಕ್, ಡಿ.ಪಿ.ಧನಂಜಯ, ಬಿ.ಜೆ.ಸೋಮಶೇಖರ್ ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ