ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Nov 21, 2025, 02:00 AM IST
20ಎಚ್‌ವಿಆರ್1 | Kannada Prabha

ಸಾರಾಂಶ

ರಾಜ್ಯದ 700 ಪಂಚಾಯಿತಿಗಳ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸುತ್ತಮುತ್ತಲಿನ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದ ಜೆ.ಎಚ್. ಪಟೇಲ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಹಾವೇರಿ: ರಾಜ್ಯದ 700 ಪಂಚಾಯಿತಿಗಳ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸುತ್ತಮುತ್ತಲಿನ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದ ಜೆ.ಎಚ್. ಪಟೇಲ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಗರದ ಮುನ್ಸಿಪಲ್ ಮೈದಾನದಿಂದ ವಿದ್ಯಾರ್ಥಿಗಳು ಮೆರವಣಿಗೆ ಆರಂಭಿಸಿ ಜೆ.ಎಚ್. ಪಟೇಲ್ ವೃತ್ತದಲ್ಲಿ ಸಮಾವೇಶಗೊಂಡರು. ನಂತರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಖಾಸಗಿ ಶಾಲಾ ಕಾಲೇಜುಗಳಿಗೆ ಕಡಿವಾಣ ಹಾಕುವ ಬದಲಾಗಿ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಬಂದ್ ಮಾಡಲು ಮುಂದಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಸರ್ಕಾರಕ್ಕೆ ತಾಕತ್ತು ಇದ್ದರೆ ಸರ್ಕಾರಿ ಶಾಲೆಯ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಿ ಎಂದು ಆಗ್ರಹಿಸಿದರು.ಈ ಕೆಪಿಎಸ್ ಶಾಲೆಯಿಂದ ವಿಲೀನವಾಗುತ್ತಿರುವ ಶಾಲೆಗಳು ಸುಮಾರು 2ರಿಂದ 6 ಕಿಮೀ ದೂರದಲ್ಲಿದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ದಾಖಲಾತಿ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಮಾಡದೇ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ನೀಡದೆ ಹಾಗೂ ಸೈಕಲ್ ಯೋಜನೆ ನಿಲ್ಲಿಸಿರುವುದು ಹೀಗೆ ಯಾವುದೇ ಸೌಲಭ್ಯ ನೀಡದೆ ಸರ್ಕಾರ ಖಾಸಗಿಯವರ ಲಾಬಿಗೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಖಾಲಿ ಇರುವ 59,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ್ ಮೂಲಕ ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾವೇರಿ ಹರವಿಶೆಟ್ಟರ್, ತನುಜಾ ನೆಗಳೂರು, ಸುದೀಪ್ ಲಮಾಣಿ, ಕಿರಣ್ ಎಲ್, ತನುಜಾ ನೆಗಳೂರ, ಪ್ರದೀಪ್ ಲಮಾಣಿ, ಕಾವೇರಿ ಹರವಿಶೆಟ್ಟರ್, ಮಮತಾ ವಡ್ಡರ್, ಮೇಘ ಮೇಟಿ, ಸ್ವಪ್ನ ಕನವಳ್ಳಿ, ಭೀಮಮ್ಮ ವಡ್ಡರ್, ಸೋನಿಯಾ ನದಾಫ್, ವಂದನಾ ಬಾರ್ಕೆರ್, ಪ್ರಿಯಾಂಕ ಎಲ್, ಶ್ವೇತಾ ಎಲ್, ಕಾವೇರಿ ಪಾಟೀಲ್, ಪುಷ್ಪ ನಾಯಕ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ