ಕನ್ನಡಪ್ರಭ ವಾರ್ತೆ ಮದ್ದೂರು
ಸಹಕಾರಿ ಕ್ಷೇತ್ರದಲ್ಲಿ ಪರಿಶಿಷ್ಟರಿಗೆ ನಾಮಿನಿ ಮೀಸಲಾತಿ ನೀಡಿದರೆ ಸಹಕಾರಿ ಸಂಸ್ಥೆಗಳನ್ನು ಮುಚ್ಚ ಬೇಕಾಗುತ್ತದೆ ಎಂದು ಹೇಳಿಕೆ ನೀಡಿರುವ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ವಿರೋಧಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಸಮನ್ವಯ ಸಮಿತಿಯ ಅಂದಾನಿ ಸೋಮನಹಳ್ಳಿ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಕಚೇರಿ ಎದುರು ಧರಣಿ ನಡೆಸಿದರು. ಮೀಸಲಾತಿ ವಿರೋಧಿ ಎಂದು ಧಿಕ್ಕಾರ ಕೂಗಿ ಮನುವಾದಿ ಜಿ.ಟಿ.ದೇವೇಗೌಡರನ್ನು ವಿಧಾನಸಭಾಧ್ಯಕ್ಷರು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಪರ ಕಾಳಜಿಯಿಂದ ಸಹಕಾರಿ ಕ್ಷೇತ್ರಗಳಲ್ಲಿ ಪರಿಶಿಷ್ಟರಿಗೆ ನಾಮಿನಿಯಲ್ಲಿ ಮೀಸಲಾತಿ ವಿಧೇಯಕ ಮಂಡನೆ ಮಾಡಿ ಸಹಕಾರಿ ಕ್ಷೇತ್ರಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ನಿಗದಿ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.ಆದರೆ, ಶಾಸಕ ಜಿ.ಟಿ. ದೇವೇಗೌಡ ಶಾಸನ ಸಭೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ನಾಮಿಯಲ್ಲಿ ಮೀಸಲಾತಿ ನೀಡಿದರೆ ಸಹಕಾರಿ ಸಂಸ್ಥೆಗಳನ್ನು ಮುಚ್ಚ ಬೇಕಾಗುತ್ತದೆ ಎಂದು ಮೀಸಲಾತಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಸಮನ್ವಯ ಸಮಿತಿ ಮುಖಂಡರಾದ ಎಂ.ಶಿವು, ಅಂಬರೀಶ್, ಗಂಗರಾಜು, ಮಾದೇಶ, ಕುಮಾರ, ದೇವಯ್ಯ, ಸುಂದರೇಶ, ಭಾನುಪ್ರಕಾಶ್, ಸಿದ್ದ ರಾಮು, ಶಂಕರ್ ಮತ್ತಿತರರು ಭಾಗವಹಿಸಿದ್ದರು.ಆರೋಗ್ಯ ತಪಾಸಣಾ ಶಿಬಿರಕ್ಕೆ ರಾಜಶೇಖರ್ ಚಾಲನೆ
ಮಂಡ್ಯ:ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ರೋಟರಿ ಅಧ್ಯಕ್ಷ ಸಿರಿಭೈರವ ರಾಜಶೇಖರ್ ಉದ್ಘಾಟಿಸಿದರು.
ರೋಟರಿ ಇನ್ನರ್‌ವ್ಹೀಲ್ ಸಂಸ್ಥೆ, ಮಂಗಲ ಗ್ರಾಪಂ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮೈಸೂರಿನ ನಾರಾಯಣ ಹೆಲ್ತ್ ವತಿಯಿಂದ ನಡೆದ ಶಿಬಿರದ ವೇಳೆ ಮಾತನಾಡಿದ ರಾಜಶೇಖರ್ ಅವರು, ರೋಟರಿ ಸಂಸ್ಥೆ ನಡೆ ಆರೋಗ್ಯದ ಕಡೆ ಎಂಬ ನಿಟ್ಟಿನಲ್ಲಿ ಪ್ರತಿ ತಿಂಗಳು ಒಂದೊಂದು ಶಿಬಿರ ನಡೆಸುತ್ತಾ ಬರುತ್ತಿದೆ ಎಂದರು.ಪ್ಲಾಸ್ಟಿಕ್ ಮುಕ್ತ ಮಂಡ್ಯ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಪ್ಲಾಸ್ಟಿಕ್ ಮುಕ್ತ ಮಾಡುವ ನಮ್ಮ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ಮಂಗಲ, ಹೆಬ್ಬಕವಾಡಿ, ಲೋಕಸರ, ತಿಮ್ಮನಹೊಸೂರು, ಮಾರಸಿಂಗನಹಳ್ಳಿ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತ ಪರೀಕ್ಷೆ, ಬಿಪಿ, ಇಸಿಜಿ, ಇನ್ನಿತರೆ ತಪಾಸಣೆ ನಡೆಸಲಾಯಿತು.ರೋಟರಿ ಸಂಸ್ಥೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಜೋನ್ ಕಾರ್ಯದರ್ಶಿ ಬರ್ನಾಡಪ್ಪ, ಸಮುದಾಯ ಸೇವೆ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಸಿ., ಸದಸ್ಯ ರವಿ, ಇನ್ನರ್‌ವ್ಹೀಲ್ ಅಧ್ಯಕ್ಷ ಸುನಿತಾ, ಕಾರ್ಯದರ್ಶಿ ಅನುಅರುಣ್, ಪುಷ್ಪಲತಾ, ಗ್ರಾಪಂ ಪಿಡಿಒ ಕೃಷ್ಣೇಗೌಡ, ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಜಗದೀಶ್, ಕೆಂಪಮ್ಮ, ಕೀರ್ತಿಕುಮಾರಿ ಡೇರಿ ಅಧ್ಯಕ್ಷ ನಾಗರಾಜು ಇದ್ದರು.