ಬಾಕಿ ಬಿಲ್ ಪಾವತಿಗೆ ನಾಡಿದ್ದು ಪ್ರತಿಭಟನೆ: ಸಿ.ಆರ್‌.ರೂಡಗಿ

KannadaprabhaNewsNetwork |  
Published : Feb 12, 2025, 12:31 AM IST
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸಿ.ಆರ್‌.ರೂಡಗಿ ಮಾತನಾಡಿದರು. | Kannada Prabha

ಸಾರಾಂಶ

ಬಾಕಿ ಇರುವ ಬಿಲ್‌ನ ಹಣ ಬಿಡುಗಡೆಗಾಗಿ ಆಗ್ರಹಿಸಿ ನಗರದಲ್ಲಿ ಗುತ್ತಿಗೆದಾರರ ಸಂಘದಿಂದ ಫೆ.14 ರಂದು ಸಾಂಕೇತಿಕವಾಗಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ ಗುತ್ತಿಗೆದಾರರು ಮಾಡಿರುವ ಎಲ್ಲಾ‌ ಇಲಾಖೆಗಳಲ್ಲಿನ ಎಲ್ಲ ಕಾಮಗಾರಿಗಳ ಬಿಲ್‌ ಮೊತ್ತ ಬಾಕಿ‌ ಇವೆ. ಬಾಕಿ ಇರುವ ಬಿಲ್‌ನ ಹಣ ಬಿಡುಗಡೆಗಾಗಿ ಆಗ್ರಹಿಸಿ ನಗರದಲ್ಲಿ ಗುತ್ತಿಗೆದಾರರ ಸಂಘದಿಂದ ಫೆ.14 ರಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸಿ.ಆರ್‌.ರೂಡಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.14ರಂದು ಬೆಳಗ್ಗೆ 10ಗಂಟೆಗೆ ನಗರದ ಶ್ರೀ ಸಿದ್ಧೆಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಗುವುದು. ಮುಖ್ಯಮಂತ್ರಿಗಳು ಹಾಗೂ ಆಯಾ ಇಲಾಖೆಗಳ ಸಚಿವರು ಎಚ್ಚೆತ್ತುಕೊಂಡು ತಕ್ಷಣ ಗುತ್ತಿಗೆದಾರರ ಮನವಿಗೆ ಸ್ಪಂದಿಸಿ ಫೆಬ್ರುವರಿ ತಿಂಗಳು ಮುಗಿಯುವುದರೊಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

2025 ಜನವರಿ 31ರವರೆಗೆ ಕೆಬಿಜೆಎನ್‌ಎಲ್‌ನಲ್ಲಿ ₹1600 ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ ₹500 ಕೋಟಿ, ಜಿಲ್ಲಾ ಪಂಚಾಯಿತಿ *(PRE)* ನಲ್ಲಿ ₹175 ಕೋಟಿ, ಜಿಲ್ಲಾ ಪಂಚಾಯಿತಿ * (RWS)* ನಲ್ಲಿ ₹100 ಕೋಟಿ, ಮಹಾನಗರ ಪಾಲಿಕೆಯಲ್ಲಿ ₹100 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ ₹100ಕೋಟಿ, ಕೆಎನ್‌ಎನ್‌ಎಲ್‌ನಲ್ಲಿ ₹300 ಕೋಟಿ, ಸ್ಲಂ ಬೋರ್ಡ್‌ ನಲ್ಲಿ ₹50ಕೋಟಿ ಸೇರಿ ಜಿಲ್ಲಾದ್ಯಂತ ವಿವಿಧ ಇಲಾಖೆಗಳ ಒಟ್ಟು ₹2975 ಕೋಟಿ ಬಿಲ್ ಬಾಕಿ ಉಳಿದಿದೆ. ಇನ್ನು ರಾಜ್ಯಾದ್ಯಂತ ಸೇರಿದರೆ ಬರೋಬ್ಬರಿ ₹32ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ ಎಂದರು.

ಗೌರವಾಧ್ಯಕ್ಷ ಅರುಣ ಮಠ ಮಾತನಾಡಿ, ಹಿಂದಿನ ಸರ್ಕಾರದ ಕೊನೆಯ ಭಾಗದಲ್ಲಿ ಹಾಗೂ ಪ್ರಸ್ತುತ ಸರ್ಕಾರ ಬಂದಾಗಿನಿಂದ ಮಾಡಿರುವ ಕಾಮಗಾರಿಗಳ ಬಿಲ್ ಮೂರು ವರ್ಷಗಳು ಕಳೆದರೂ ಪಾವತಿಯಾಗುತ್ತಿಲ್ಲ. ಇದರಿಂದಾಗಿ ರಾಜ್ಯಾದ್ಯಂತ ಗುತ್ತಿಗೆದಾರರು ಸಂಕಷ್ಠಕ್ಕೆ ಸಿಲುಕಿದ್ದು, ತಕ್ಷಣ ಬಾಕಿ ಉಳಿದಿರುವ ಬಿಲ್ ಮೊತ್ತ ಬಿಡುಗಡೆ ಮಾಡಬೇಕು ಎಂದರು.

ಗುತ್ತಿಗೆದಾರ ಸದಾಶಿವ ಚಿಕರೆಡ್ಡಿ ಮಾತನಾಡಿ, ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು ಅಥವಾ ಎಲ್ಲ ಗುತ್ತಿಗೆದಾರರ ಕುಟುಂಬಗಳು ದಯಾಮರಣ ಕೋರಿ ಅರ್ಜಿ ಹಾಕಬೇಕಾಗುತ್ತದೆ. ಈಗಾಗಲೇ ಸಾಲ ಮಾಡಿ ಕೆಲಸ ಮಾಡಿದ್ದರಿಂದ ಸಾಲ ತೀರಿಸುವುದು ಸಮಸ್ಯೆ ಆಗಿದೆ. ಸರ್ಕಾರಗಳು ಮೊದಲು ದುಡ್ಡು ಇಟ್ಟು ಟೆಂಡರ್ ಕರೆಯುತ್ತಿದ್ದರು. ಈಗ ದುಡ್ಡು ಇಲ್ಲದೆ ಟೆಂಡರ್ ಕರೆಯುತ್ತಿದ್ದು ನಮಗೆಲ್ಲ ಸಮಸ್ಯೆ ಆಗಿದೆ. ಮೊದಲು ಎರಡ್ಮೂರು ತಿಂಗಳಲ್ಲಿ ಬಿಲ್‌ ಕ್ಲೀಯರ್ ಆಗ್ತಿತ್ತು. ಈಗ ಮೂರು ವರ್ಷದಿಂದ ಆಗಿಲ್ಲ. ಬಹಳ ಒತ್ತಡ ಹಾಕಿದಾಗಲೊಮ್ಮೆ ಕೇವಲ 5ರಿಂದ 10 ಪರ್ಸೆಂಟ್ ನಷ್ಟು ಮಾತ್ರ ಬಾಕಿ ಬಿಲ್ ಕ್ಲೀಯರ್ ಮಾಡುತ್ತಿದ್ದಾರೆ. ಈ ಕುರಿತು ರಾಜ್ಯಮಟ್ಟದಲ್ಲಿ ಸಚಿವರುಗಳು ಸಭೆ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಎಸ್.ಐ.ಡೋಣೂರಮಠ, ಐ.ಎಂ.ಪಟ್ಟಣಶೆಟ್ಟಿ, ಸುನೀಲ ಉಳ್ಳಾಗಡ್ಡಿ, ಎಲ್‌.ಡಿ.ಮಡಗೊಂಡ, ರಮೇಶ ಪಾಟೀಲ, ಆರ್‌.ಬಿ.ಅಸ್ಕಿ, ಸಿದ್ದು ಬಿರಾದಾರ, ಸಜಿತ್ ಬಿಂಜಲಭಾವಿ, ಜೆ.ಜೆ.ಕಲ್ಲೂರ, ಆರ್‌.ಎಂ.ಮಾವಿನಗಿಡದ, ಎ.ಎಸ್.ಬಿರಾದಾರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!