ಬಳ್ಳಾರಿ: ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆ ಹಿನ್ನೆಲೆ ನಗರ ಹೊರ ವಲಯದಲ್ಲಿ ಅಳವಡಿಸಲಾಗಿದ್ದ ಪಕ್ಷದ ಬ್ಯಾನರ್‌ಗಳು ಹಾಗೂ ಬಾವುಟಗಳನ್ನು ತೆರವುಗೊಳಿಸಿದ ಮಹಾನಗರ ಪಾಲಿಕೆಯ ಕ್ರಮ ಖಂಡಿಸಿ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ಎಸ್ಪಿ ಸುಮನ್ ಡಿ. ಪನ್ನೇಕರ್ ಹಾಗೂ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಬ್ಯಾನರ್ ಅಳವಡಿಕೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ. ಇಷ್ಟಾಗಿಯೂ ಬ್ಯಾನರ್ ಅಳವಡಿಕೆಗೆ ಮುಂದಾಗುವುದು ಸರಿಯಾದ ಕ್ರಮವಲ್ಲ ಎಂದು ಮನವೊಲಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಮಗೆ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಬಾವುಟ ಮಾತ್ರ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಪಾಲಿಕೆ ಸದಸ್ಯ ಗೋವಿಂದರಾಜುಲು, ಶ್ರೀನಿವಾಸ ಮೋತ್ಕರ್, ಎಚ್.ಹನುಮಂತಪ್ಪ, ಕೆಎಸ್ ದಿವಾಕರ್, ಎಸ್.ಮಲ್ಲನಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸುಮಾರು ಒಂದುವರೆ ತಾಸು ನಡೆದ ರಸ್ತೆ ತಡೆಯಿಂದ ವಾಹನ ಸಂಚಾರ ನಿಲುಗಡೆಯಾಗಿ ಸಾರ್ವಜನಿಕರು ಪರದಾಡಿದರು.
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಕಟ್ಟುವ ವಿಚಾರದಲ್ಲಿ ಜ. 1 ರಂದು ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಘಟನೆ ಹಿನ್ನೆಲೆ ಜಿಲ್ಲೆಯಲ್ಲಿ ಬ್ಯಾನರ್ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.