ಶಿರಹಟ್ಟಿ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯದ ದುರುದ್ದೇಶ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ಒತ್ತಡದಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಪಕ್ಷಪಾತಿ ನಡೆ ಖಂಡಿಸಿ ಆ.೨೨ ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬ ಸಮಾಜದ ಮುಖಂಡ ಮಂಜುನಾಥ ಘಂಟಿ ಹೇಳಿದರು.
ಪಟ್ಟಣದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಭೆ ನಡೆಸಿ ಮಾತನಾಡಿದರು.ರಾಜ್ಯಪಾಲರ ಅಸಂವಿಧಾನಿಕ ನಡೆ ಖಂಡಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪ್ರಾಸಿಕ್ಯೂಷನ್ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ನಡೆದಿದೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಪ್ರಯತ್ನ ಮಾಡುತ್ತಿರುವುದು ಈ ನಡೆಯಿಂದ ಎಲ್ಲರಿಗೂ ತಿಳಿದಿದೆ ಎಂದರು.ಸಂವಿಧಾನ ವಿರೋಧಿ ಕ್ರಮ ಅನುಸರಿಸುತ್ತಿರುವ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ತಕ್ಷಣ ರಾಜಿನಾಮೆ ನೀಡಿ ಗೌರವಯುತವಾಗಿ ಹೊರ ಹೋಗಬೇಕು. ಬಿಜೆಪಿ ಕಾರ್ಯಾಲಯವನ್ನಾಗಿ ಮಾಡಿಕೊಂಡಿರುವ ರಾಜಭವನದ ಗೌರವ ಕಾಪಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕಳಂಕ ರಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಳಂಕಿತರನ್ನಾಗಿ ಮಾಡ ಹೊರಟಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ. ತಮ್ಮ ರಾಜಕೀಯ ಜೀವನದುದ್ದಕ್ಕೂ ತಪ್ಪುಗಳಿಗೆ ಅವಕಾಶ ನೀಡದೇ ಸ್ವಚ್ಛ ರಾಜಕಾರಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸೂಚನೆ ಮೇರೆಗೆ ವಿಚಾರಣೆಗೆ ಅನುಮತಿ ನೀಡಿರುವದು ಹೇಯ ಕಾರ್ಯವಾಗಿದ್ದು, ರಾಜ್ಯಪಾಲರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡದೇ ಇದ್ದಲ್ಲಿ ಯಾವುದೇ ಪ್ರತಿಭಟನೆಗೂ ಸಿದ್ಧ ಎಂದು ಹೇಳಿದರು.ತಾಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ಆನಂದ ಮಾಳೆಕೊಪ್ಪ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆದರೆ ತಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಭಾವಿಸಿ ಬಿಜೆಪಿ ಮುಖಂಡರು ರಾಜ್ಯಪಾಲರ ಮೂಲಕ ತಪ್ಪು ಹೆಜ್ಜೆ ಇಡುತ್ತಿದ್ದಾರೆ. ತಕ್ಷಣ ತಮ್ಮ ಆದೇಶ ಹಿಂಪಡೆಯಬೇಕು. ಇಲ್ಲದೇ ಇದ್ದಲ್ಲಿ ರಾಜ್ಯಪಾಲ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊನ್ನೇಶ ಪೋಟಿ, ಪಪಂ ಸದಸ್ಯ ಹೊನ್ನಪ್ಪ ಶಿರಹಟ್ಟಿ, ಸಿದ್ದಪ್ಪ ಹೊಸಳ್ಳಿ, ದೇವಪ್ಪ ಬಟ್ಟೂರ, ಪರಶುರಾಮ ಈಳಿಗೇರ, ಮಂಜುನಾಥ ಹುಬ್ಬಳ್ಳಿ, ವಸಂತ ಜಗ್ಗಲರ, ಹನಮಂತ ಕುಳಗೇರಿ, ಮಹೇಂದ್ರ ಉಡಚಣ್ಣವರ, ನಿಂಗಪ್ಪ ಮಾಚೇನಹಳ್ಳಿ ಹನಮಂತ ಗೊಜನೂರ ಮತ್ತಿತರರು ಉಪಸ್ಥಿತರಿದ್ದರು.