ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾಡಳಿತ ಭವನದ ಎದುದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಚನ್ನಗಿರಿ ತಾ. ಹಕ್ಕಿ ಪಿಕ್ಕಿ ಅಲೆಮಾರಿಗಳ ಸಂಘದ ಮುಖಂಡ ಗಂಡುಗಲಿ ನೇತೃತ್ವದಲ್ಲಿ ಚನ್ನಗಿರಿ. ಅಸ್ತಾಫನಹಳ್ಳಿ ಗ್ರಾಮದಲ್ಲಿ ಹೆಚ್ಚುತ್ತಿರುವ ಮತಾಂತರ ಚಟುವಟಿಕೆ ತಡೆದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಹಕ್ಕಿಪಕ್ಕಿ ಜನಾಂಗದವರು ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ, ಹಕ್ಕಿಪಿಕ್ಕಿ ಮುಖಂಡ ಗಂಡುಗಲಿ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಚನ್ನಗಿರಿ ತಾ. ಅಸ್ತಾಫನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗವಾದ ಹಕ್ಕಿಪಿಕ್ಕಿ ಸಮುದಾಯದವರಿಗೆ ಇಲ್ಲಸಲ್ಲದ ಆಸೆ, ಆಮಿಷಗಳನ್ನು ತೋರಿಸಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಅಪಪ್ರಚಾರ, ಸುಳ್ಳು ಹೇಳಿ, ಹಣದ ಆಸೆ ತೋರಿಸಿ ಜಗತ್ತಿಗೆ ಯೇಸು ಕ್ರಿಸ್ತರನ್ನು ಬಿಟ್ಟರೆ ಬೇರಾವುದೇ ದೇವರೂ ಇಲ್ಲವೆಂದು ಹೇಳುತ್ತಾ ಮತಾಂತರ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮದ ಸರ್ಕಾರಿ ಸ್ಮಶಾನದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಿದ್ದಾರೆ. ಈಗ ಗ್ರಾಮದಲ್ಲಿ ಮತ್ತೊಂದು ಚರ್ಚ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ದೂರಿದರು.
ಹಿಂದೆ ಇದೇ ಚರ್ಚ್‌ನವರನ್ನು ತಹಸೀಲ್ದಾರ್ ಕೋರ್ಟಿಗೆ ಕರೆಸಿ ವಿಚಾರಣೆ ಸಹ ಮಾಡಲಾಗಿತ್ತು. ಆಗ ಇನ್ನು ಮುಂದೆ ಯಾರ ಮನೆಗೂ ಹೋಗಿ ಮತ ಪ್ರಚಾರ ಮಾಡುವುದಿಲ್ಲ. ಚರ್ಚ್ ಬಳಿಗೆ ಯಾರನ್ನೂ ಕರೆಯುವುದಿಲ್ಲ ಎಂಬುದಾಗಿ ಮತಾಂತರ ಮಾಡುತ್ತಿರುವವರು ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಅಷ್ಟೇ ಅಲ್ಲ, ಅಂದು ಇಡೀ ಗ್ರಾಮಸ್ಥರ ಬಳಿ ಕ್ಷಮೆಯಾಚಿಸಿದ್ದರು. ಈಗ ಎರಡೂ ಚರ್ಚ್‌ನವರು ಮತ್ತೆ ಮತಾಂತರಕ್ಕೆ ಕೈಹಾಕಿದ್ದು, ಹಕ್ಕಿಪಿಕ್ಕಿ ಜನರಿಗೆ ಆಮಿಷವೊಡ್ಡುತ್ತಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಹೂವಿನಮಡು ನಾಗರಾಜ, ಚಿನ್ನಸಮುದ್ರ ಭೀಮಾನಾಯ್ಕ, ಉಮೇಶ, ಅಸ್ತಾಫನಹಳ್ಳಿ ಗ್ರಾಮದ ಮುಖಂಡರಾದ ಗುರುನಾಥ, ಲಿಂಗಣ್ಣ, ಮಧುಸೂದನ, ಡಿಯಾಸ್ ಬಾಬು, ಸಂತೋಷ್, ಬಾಬು, ಪಪ್ಪಿ, ಶೈಲಾ, ಲೀಲಾವತಿ, ಮಹಾತ್ಮೆ, ಗುಣಸುಂದರಿ, ವಿಜಯಾ, ಕಲ್ಲೇಶ್ ಅನೇಕರು ಭಾಗವಹಿಸಿದ್ದರು.