ಕೇಂದ್ರ ಸರ್ಕಾರದ ಕಾರ್ಪೊರೇಟ್ ನೀತಿ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Feb 18, 2024 1:40 AM

ಸಾರಾಂಶ

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತರು ನಗರದ ಕೋಡಿಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜೆಸಿಟಿಯು ಕರೆ ಕೊಟ್ಟಿದ್ದ ಗ್ರಾಮೀಣ ಭಾರತ ಬಂದ್ ಹಿನ್ನೆಲೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತರು ನಗರದ ಕೋಡಿಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಕಾಮ್ರೇಡ್ ಎಸ್.ಎನ್. ಸ್ವಾಮಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ಸರ್ಕಾರ ರೈತನನ್ನು ಬಲಿ ತೆಗೆದುಕೊಳ್ಳುತ್ತಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಲಾಗುವುದೆಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ ವಚನ ಭ್ರಷ್ಟವಾಗಿದೆ. ಅದು ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುತ್ತಿದೆಯೋ ಹೊರತು, ರೈತರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಕ್ರಮ ತೆಗದುಕೊಳ್ಳುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ರೈತರ ಉತ್ಪನ್ನಗಳನ್ನು ಸಂಪೂರ್ಣವಾಗಿ ಖರೀದಿಸುತ್ತಿಲ್ಲ ಎಂದರು.

ಕೇಂದ್ರ ಸರ್ಕಾರವು ರೈತರ ಬೆಳೆಗಳಿಗೆ ಪುಡಿಗಾಸನ್ನು ಕನಿಷ್ಟ ಬೆಂಬಲ ಬೆಲೆಯಾಗಿ ಕೊಡುತ್ತಿದೆ. ಇದರಿಂದಾಗಿ ರೈತ ಸಾಲದ ಸುಳಿಗೆ ಸಿಲುಕುತ್ತಿದ್ದಾನೆ. ಅರಣ್ಯ ಇಲಾಖೆಗೆ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲು ಆದೇಶಿಸುವ ಕೇಂದ್ರ ಸರ್ಕಾರ ಹಾಗೂ ಅನರ್ಹರು ಎನ್ನುವ ಹೆಸರಿನಲ್ಲಿ ಜಮೀನು ಮಂಜೂರು ಮಾಡದ ರಾಜ್ಯ ಸರ್ಕಾರಗಳ ನಡೆಯ ಹಿಂದೆ ಜಮೀನುಗಳನ್ನು ಕಾರ್ಪೊರೆಟ್ ಕಂಪನಿಗಳಿಗೆ ನೀಡುವ ಹುನ್ನಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಭೈರನಾಯ್ಕನಹಳ್ಳಿ ಮಾತನಾಡಿ, ಇಡೀ ದೇಶದ ರೈತರ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ದಗೊಳಿಸಬೇಕು. ಕೊಬ್ಬರಿ ಸೇರಿದಂತೆ ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಕೇಂದ್ರ ಸರ್ಕಾರ ಕೇವಲ ಉತ್ಪಾದನೆಯ ಶೇ.25ರಷ್ಟು ಖರೀದಿಸಲು ಮಾತ್ರ ಅನುಮತಿ ನೀಡಬೇಕಿತ್ತು. ಇಡೀ ರಾಜ್ಯಕ್ಕೆ ಕೇವಲ 62,500 ಕ್ವಿಂಟಲ್ ಖರೀದಿಗೆ ಸಿಮಿತಗೊಳಿಸಿದ್ದು ಆದರೆ ಪ್ರಸ್ತುತ ತಿಪಟೂರು ಎಪಿಎಂಸಿಯಲ್ಲಿ 2.1ಲಕ್ಷ ಕ್ವಿಂಟಲ್ ಕೊಬ್ಬರಿ ವಹಿವಾಟು ನಡೆಯುತ್ತದೆ ಎಂದರು.

ಇದು ರೈತರಿಂದ ಕೊಬ್ಬರಿ ಖರೀದಿ ಪ್ರಕ್ರಿಯೆಯು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಕೊಬ್ಬರಿ ಖರೀದಿಯ ನೋಂದಣಿಯಲ್ಲಿ ಸಾಕಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ರೈತರ ಎಲ್ಲಾ ಕೊಬ್ಬರಿ ಉತ್ಪಾದನೆಯನ್ನು ಖರೀದಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಪ್ರಸನ್ನ ಕುಮಾರ್‌, ಕಾರ್ಯದರ್ಶಿ ಪ್ರಶಾಂತ್ ಹಾಲ್ಕುರಿಕೆ, ತಾ.ಉಪಾಧ್ಯಕ್ಷ ರಂಗಧಾಮಯ್ಯ, ಮಲ್ಲಿಕಾರ್ಜುನ, ವಿಶ್ವನಾಥ, ರುದ್ರಣ್ಣ, ಚಿಕ್ಕನಾಯಕನಹಳ್ಳಿಯ ಮಂಜುನಾಥ್, ದಾಸೀಹಳ್ಳಿ ಧರಣೀಶ್, ಗೌರಮ್ಮ ಮತ್ತಿತರರಿದ್ದರು.

Share this article