ಕನ್ನಡಪ್ರಭ ವಾರ್ತೆ ಬಳ್ಳಾರಿ
ಬ್ರಿಟಿಷರ ಕಾಲದಿಂದಲೂ ಬಳ್ಳಾರಿ ಜಿಲ್ಲೆಯು ಸಿದ್ಧ ಉಡುಪು ಉದ್ಯಮಕ್ಕೆ ಖ್ಯಾತಿ ಪಡೆದಿದೆ. ಅಖಂಡ ಬಳ್ಳಾರಿ ಜಿಲ್ಲೆ ಮತ್ತು ಗಡಿಭಾಗದ ಅಖಂಡ ಆಂಧ್ರಪ್ರದೇಶದ ವಿವಿಧ ಗ್ರಾಮಗಳಲ್ಲಿ ಸಿದ್ಧ ಉಡುಪು ಉದ್ಯಮ ಗೃಹ ಕೈಗಾರಿಕೆಯಾಗಿ ಬೆಳೆದಿದೆ. ಬಳ್ಳಾರಿಯನ್ನು ಕೇಂದ್ರವನ್ನಾಗಿಸಿಕೊಂಡು ಬೃಹತ್ತಾಗಿ ಬೆಳೆದಿರುವ ಸಿದ್ಧ ಉಡುಪು ಉದ್ಯಮದಲ್ಲಿ ಲಕ್ಷಾಂತರ ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗ ಕಂಡುಕೊಂಡಿದ್ದಾರೆ. ಬಹುತೇಕ ಗೃಹಿಣಿಯರು ಮತ್ತು ಅಸಂಘಟಿತ ವಲಯದ ನೌಕರರು ಇರುವ ಸಿದ್ಧ ಉಡುಪು ಉದ್ಯಮಕ್ಕೆ ₹5 ಸಾವಿರ ಕೋಟಿ ಬಂಡವಾಳ ಹೂಡುವ ಮೂಲಕ ಜೀನ್ಸ್‌ಪಾರ್ಕ್ (ಅಪರೆಲ್ ಪಾರ್ಕ್) ಪ್ರಾರಂಭಿಸುವುದಾಗಿ ಚುನಾವಣೆಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದರು. ರಾಹುಲ್ ಗಾಂಧಿ ಅವರು ಬಹಿರಂಗ ಸಭೆಯಲ್ಲಿ ಮಾಡಿದ್ದ ಘೋಷಣೆ ಈ ಭಾಗದ ಜೀನ್ಸ್ ಉದ್ಯಮ ಹಾಗೂ ಸಿದ್ಧ ಉಡುಪು ಉದ್ಯಮಕ್ಕೆ ಹೊಸ ಆಸೆ ಗರಿಗೆದರಿತ್ತು. ಆದರೆ, ಜೀನ್ಸ್ ಉದ್ಯಮದ ಪ್ರಗತಿಗೆ ಹೊಸ ಆಯಾಮ ನೀಡುವ ಬದಲು ಇರುವ ಸೌಕರ್ಯಗಳನ್ನು ಬಳ್ಳಾರಿಯಿಂದ ಎತ್ತಂಗಡಿ ಮಾಡುವ ಮೂಲಕ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮುಖಂಡ ಸಿರಿಗೇರಿ ಪನ್ನರಾಜ್ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಯಶ್ವಂತ್ ರಾಜ್ ನಾಗಿರೆಡ್ಡಿ ಮಾತನಾಡಿ, ಈ ಭಾಗದ ಜೀನ್ಸ್ ಉದ್ಯಮದ ಪ್ರಗತಿಗೆ ಘೋಷಣೆ ಮಾಡಿದ್ದ ಅಪರೆಲ್ ಪಾರ್ಕ್ ಕನಸು ಭಗ್ನಗೊಂಡಿದೆ. ಈ ವರೆಗೆ ಪಾರ್ಕ್ ನಿರ್ಮಾಣ ಸಂಬಂಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಬಳ್ಳಾರಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಬಳ್ಳಾರಿಯಲ್ಲಿ ನಿರ್ಮಾಣವಾಗಬೇಕಾಗಿರುವ ಮೆಗಾ ಡೇರಿಯನ್ನು ವಿಜಯನಗರಕ್ಕೆ ಜಿಲ್ಲೆಗೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಮೆಗಾ ಡೇರಿ ನಿರ್ಮಾಣ ಸಂಬಂಧ ಬಳ್ಳಾರಿ ಹೊರ ವಲಯದ ಕೊಳಗಲ್ಲು ಬಳಿ ಸ್ಥಳ ಗುರುತಿಸಿ, ನಿರಾಪೇಕ್ಷಣೆ ಪತ್ರ ನೀಡಿದ್ದೂ ಅಲ್ಲದೇ, ಜಿಲ್ಲಾಡಳಿತಕೂಡ 15 ಎಕರೆ ಭೂಮಿ ನೀಡಿದೆ. ಈ ಹಂತದಲ್ಲಿ ಮೆಗಾ ಡೇರಿ ಸ್ಥಳಾಂತರ ಮಾಡುವ ಹುನ್ನಾರ ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ಈ ಭಾಗದ ಜೀನ್ಸ್ ಹಾಗೂ ಸಿದ್ಧ ಉಡುಪು ಉದ್ಯಮದ ಪ್ರಗತಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಜವಳಿ ಮತ್ತು ಕೈಮಗ್ಗ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸ್ಥಳಾಂತರ ನಿಲುವು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಗಾಂಧಿಭವನದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತೆರಳಿ, ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಕಳುಹಿಸಿಕೊಟ್ಟರು.ಜಿಲ್ಲಾ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ತಾಲೂಕು ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಇಬ್ರಾಹಿಂ ಬಾಬು, ಜೀನ್ಸ್ ಉಡುಪು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಕೀಶ್ ಜೈನ್, ಜೀನ್ಸ್ ವಾಷರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಲ್ಲಿಕಾರ್ಜುನ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ, ಮಹಾರುದ್ರಗೌಡ, ಸಹಮತ ಸಂಘಟನೆಯ ಸಂಗನಕಲ್ಲು ವಿಜಯಕುಮಾರ್, ಓಂಕಾರಪ್ಪ ಕಪ್ಪಗಲ್, ವಿ.ಎಸ್. ಶಿವಶಂಕರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.