ನೆಲಮಂಗಲ: ಎಚ್‌ಎಚ್‌ವಿ ಕಂಪನಿ ಪ್ರೈವೇಟ್ ಲಿಮಿಟೆಡ್ ಕಾಯಂ ನೌಕರರನ್ನು ಕೆಲಸದಿಂದ ವಜಾಗೊಳಿಸಿರುವ ಕಂಪನಿಯ ಕ್ರಮವನ್ನು ಖಂಡಿಸಿ ಕಾಯಂ ನೌಕರರು ಪ್ರತಿಭಟನೆ ನಡೆಸಿದರು.
ತಾಲೂಕಿನ ಟಿ.ಬೇಗೂರು ಬಳಿಯ ಎಚ್‌ಎಚ್‌ವಿ ಕಂಪನಿ ಪ್ರೈವೇಟ್ ಲಿಮಿಟೆಡ್ ಕಚೇರಿ ಮುಂದೆ ಸಮಾವೇಶಗೊಂಡ ನೌಕರರು, ಕಂಪನಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದ ಎಚ್‌ಎಚ್‌ವಿ ಕಂಪನಿಯ ಒಂದು ವಿಭಾಗವನ್ನು ಕೊರೋನಾ ಸಾಂಕ್ರಾಮಿಕದಿಂದ 2020ರಲ್ಲಿ ಟಿ.ಬೇಗೂರು ಗ್ರಾಮಕ್ಕೆ ಸ್ಥಳಾಂತರಿಸಿದ್ದರು. ಬಳಿಕ ನಾಲ್ಕು ವರ್ಷ ಕಂಪನಿ ಉತ್ತಮವಾಗಿಯೇ ನಡೆಯುತ್ತಿತ್ತು. 20 ಕಾಯಂ ಹಾಗೂ 150ಕ್ಕೂ ಹೆಚ್ಚು ಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ನೌಕರರ ಸಂಘ ಸ್ಥಾಪನೆ ಮಾಡಿಕೊಂಡು ಕೆಲ ಬೇಡಿಕೆ ಈಡೇರಿಸುವಂತೆ ಪ್ರಶ್ನಿಸಿದ್ದ ಕಾಯಂ ನೌಕರರನ್ನು ಕಳೆದ 2024ರ ಆಗಸ್ಟ್ 19ರಂದು ಏಕಾಏಕಿ ವಜಾಗೊಳಿಸಿದರು. ಕಂಪನಿಯ ಈ ಕ್ರಮವನ್ನು ಖಂಡಿಸಿ ಕಾರ್ಮಿಕ ಇಲಾಖೆ, ಸರ್ಕಾರಕ್ಕೆಕಂಪನಿಯ ವಿರುದ್ಧ ಮನವಿ ಮಾಡಿದರು.
ಬಳಿಕ ಕಂಪನಿಯನ್ನು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರ ಮಾಡಿದರು. ಆ.22ರಂದು ಉಪ ಕಾನೂನು ಆಯುಕ್ತರಿಗೆ ಮನವಿ ಸಲ್ಲಿಸಿದರು. ಕಳೆದ ಒಂದು ವರ್ಷದಿಂದ ಕಂಪನಿ ಹಾಗೂ ನೌಕರರ ನಡುವೆ ಸಾಕಷ್ಟು ರಾಜೀ ಪಂಚಾಯಿತಿ ಮಾಡಿದರೂ ಪ್ರಯೋಜವಾಗಿರಲಿಲ್ಲ. ಇತ್ತೀಚಿನ ನೌಕರರು ನ್ಯಾಯಾಲಯದ ಮೊರೆ ಹೋಗಿ ಕಂಪನಿಯಲ್ಲಿದ್ದ ವಸ್ತುಗಳನ್ನು ಸ್ಥಳಾಂತರ ಮಾಡದಂತೆ ತಡೆಯಾಜ್ಞೆ ತಂದಿದ್ದರು. 2025ರ ಸೆ.22ರಂದು ಏಕಾಏಕಿ ಕಾನೂನು ಉಲ್ಲಂಘನೆ ಮಾಡಿ ಕಂಪನಿ ಕೆಲ ಯಂತ್ರೋಪಕರಣಗಳನ್ನು ಸ್ಥಳಾಂತರಿಸಲು ಮುಂದಾಗಿತ್ತು. ಅದಾಗ್ಯೂ ಪೊಲೀಸರ ಸಹಕಾರ ಪಡೆದುಕೊಂಡ ಕಂಪನಿ ಪ್ರತಿಭಟನೆ ಮಾಡುತ್ತಿದ್ದ ಕಾರ್ಮಿಕರನ್ನು ತೆರವುಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಕಂಪನಿ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ.ಕಾಯಂ ನೌಕರ ಪಣ್ಮುಖಯ್ಯ ಮಾತನಾಡಿ, ಕಳೆದ 30 ವರ್ಷದಿಂದ ಕಂಪನಿಯಲ್ಲಿ ಸೇವೆ ಮಾಡಿದ್ದು ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದು ಕಾಯಂ ನೌಕರರಿಗೆ ಕಾನೂನು ಬದ್ಧವಾಗಿ ವೇತನ ಹಾಗೂ ಅವರಿಗೆ ದೊರೆಯುವ ಸೌಲಭ್ಯಗಳನ್ನು ನೀಡಬೇಕು. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಯಂತ್ರೋಪಕರಣಗಳನ್ನು ಏಕಾಏಕಿ ಸ್ಥಳಾಂತರ ಮಾಡುತ್ತಿದ್ದಾರೆ. 16 ಕಾಯಂ ನೌಕರರ ಕುಟುಂಬ ಬೀದಿಗೆ ಬಿದ್ದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರಿಗೆ ನ್ಯಾಯ ದೊರೆಕಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೌಕರರಾದ ಪರಮೇಶ್ವರಯ್ಯ, ಹನುಮಂತರಾಯಪ್ಪ, ಆನಂದ್‌ಕುಮಾರ್, ದಿನೇಶಕುಮಾರ್, ಪ್ರಶಾಂತ್, ಪ್ರಸನ್ನ, ಲಕ್ಷ್ಮೀ, ಕೃಷ್ಣಮೂರ್ತಿ, ಶ್ರೀನಿವಾಸಲು, ರವಿ, ನಾಗಭೂಷಣ, ಮಂಜುನಾಥ್, ಬಾಲು, ಮುನಿರಾಜು, ರವೀಶಾರಾಧ್ಯ ಇತರರು ಪಾಲ್ಗೊಂಡಿದ್ದರು.ಪೊಟೊ-22ಕೆಎನ್‌ಎಲ್‌ಎಮ್ 5-
ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯ ಎಚ್‌ಎಚ್‌ವಿ ಕಂಪನಿ ಪ್ರೈವೇಟ್ ಲಿಮಿಟೆಡ್ ಕಚೇರಿ ಮುಂದೆ ಸಮಾವೇಶಗೊಂಡ ನೌಕರರು ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.