ಸಿದ್ದಾಪುರ: ರಾಜ್ಯ ಸರ್ಕಾರ ಭಾರತೀಯ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಗಳಿಂದ ತೆರವುಗೊಳಿಸುವ ಆದೇಶ ನೀಡಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರು ಮೌನ ಪ್ರತಿಭಟನೆ ಹಮ್ಮಿಕೊಂಡಿತ್ತು.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ, ಇಂದು ನಾವು ಬಿಜೆಪಿ ಪದಾಧಿಕಾರಿಗಳ ಹಾಗೂ ಪ್ರಮುಖರು ಸೇರಿ ತಾಲೂಕು ಆಸ್ಪತ್ರೆ ಹತ್ತಿರ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ಈ ವಿಚಾರವನ್ನು ಗಮನಕ್ಕೆ ತರದೇ ಇದ್ದಲ್ಲಿ ಇವರು ಯಾವ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗದೇ ಇರಬಹುದು ಎಂಬ ಕಾರಣಕ್ಕಾಗಿ ೩-೪ ಜನ ಈ ವಿಷಯದ ಕುರಿತು ಮಾತನಾಡುತ್ತಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ಔಷಧಗಳು ಸಿಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಕೇಂದ್ರ ಸರ್ಕಾರ ನೇರವಾಗಿ ಮಾಡಲು ಬರುವುದಿಲ್ಲ. ರಾಜ್ಯದ ಯಾವುದೇ ಯೋಜನೆಗಳು ಜಾರಿ ಮಾಡಬೇಕಾದರೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ಬೇರೆ ವಿಚಾರವನ್ನು ಹಾಕಿ ಈ ಜನ ಔಷಧಿ ಕೇಂದ್ರಗಳನ್ನು ಮುಚ್ಚಲು ಮುಂದಾಗಿದೆ. ಇದನ್ನು ಬಿಜೆಪಿ ವಿರೋಧಿಸುತ್ತದೆ. ರಾಜಕೀಯವನ್ನು ನಾವು ಚುನಾವಣೆಯಲ್ಲಿ ಮಾಡಬಹುದೇ ವಿನಃ ಜನಸಾಮಾನ್ಯರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಹ ಔಷಧೀಯ ವಿಚಾರದಲ್ಲಿ ಮಾಡುವುದು ಖಂಡನೀಯ ಎಂದರು.
ಬಿಜೆಪಿ ಸಿದ್ದಾಪುರ ತಾಲೂಕು ಘಟಕದ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಮಾತನಾಡಿ, ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಸರ್ಕಾರಿ ಆಸ್ಪತ್ರೆಯ ಒಳಗಡೆ ಜನೌಷಧಿ ಕೇಂದ್ರಕ್ಕೆ ಅವಕಾಶ ಮಾಡಿಕೊಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಮಾಡುತ್ತೇವೆ ಎಂದು ಮಾಧ್ಯಮದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಗುರುರಾಜ ಶಾನಭಾಗ, ಎಸ್.ಕೆ. ಮೇಸ್ತ, ಸುರೇಶ ನಾಯ್ಕ ಬಾಲಿಕೊಪ್ಪ, ನಂದನ ಬರ‍್ಕರ, ವಿಜಯೇಂದ್ರ ಗೌಡರ್, ರವಿಕುಮಾರ ನಾಯ್ಕ, ತೋಟಪ್ಪ ನಾಯ್ಕ,ಮಂಜುನಾಥ ಭಟ್ಟ, ವಿನಾಯಕ ಹೆಗಡೆ ಮುಂತಾದವರಿದ್ದರು.ಸಿದ್ದಾಪುರದಲ್ಲಿ ಬಿಜೆಪಿ ಮಂಡಲದಿಂದ ಸರ್ಕಾರಿ ಆಸ್ಪತ್ರೆಯೆದುರು ಮೌನ ಪ್ರತಿಭಟನೆ ನಡೆಸಲಾಯಿತು.