ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 20, 2024, 12:58 AM IST
ಕ್ಯಾಪ್ಷನಃ19ಕೆಡಿವಿಜಿ41ಃಕೊಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಹಲ್ಲೆ ಖಂಡಿಸಿ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೊಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಹಲ್ಲೆ ಖಂಡಿಸಿ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಹತ್ಯೆ ಖಂಡಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ), ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಸೆಸ್), ಆಲ್ ಇಂಡಿಯಾ ಡೆಮೊಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಡಾ.ಎಂ.ಸಿ.ಮೋದಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪೈಶಾಚಿಕ ಕೃತ್ಯ ಖಂಡಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಎಐಎಂಎಸ್ಸೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ ಮಾತನಾಡಿ, ಕೋಲ್ಕತ್ತದಲ್ಲಿ ನಡೆದ ಪೈಶಾಚಿಕ ಕೃತ್ಯ ನೋಡಿದಾಗ ದೇಶದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಇದು ಅನಾಗರಿಕತೆ, ಕುಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇದು ಇಡೀ ದೇಶಕ್ಕೆ, ಮನುಷತ್ವಕ್ಕೆ ಮಾಡಿದ ಅಪಮಾನ. ಇಂತಹ ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಕಟ್ಟಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.

ಎಐಡಿವೈಓ ಸಂಚಾಲಕ ಎಸ್.ಪರಶುರಾಮ ಮಾತನಾಡಿ, ಇಂತಹ ಘಟನೆಗಳಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಕೃತ್ಯ ಮೌಲ್ಯ ಸಾವು ಕಂಡಿರುವುದನ್ನು ತೋರಿಸುತ್ತದೆ. ಇಂತಹ ಅಪರಾಧಗಳನ್ನು ಸರ್ಕಾರ ತಡೆಗಟ್ಟಬೇಕು. ದೌರ್ಜನ್ಯಕಾರರಿಗೆ ನಿದರ್ಶನೀಯ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಎಐಎಂಎಸ್ಸೆಸ್ ಅಖಿಲ ಭಾರತ ಉಪಾಧ್ಯಕ್ಷೆ ಬಿ.ಆರ್.ಅಪರ್ಣ ಮಾತನಾಡಿ, ಇಂತಹ ಪ್ರಕರಣಕ್ಕೆ ಅಪರಾಧಿಗಳಿಗೆ ಸರಿಯಾದಶಿಕ್ಷೆಯಾಗದಿರುವುದು ಸಹ ಪ್ರಮುಖ ಕಾರಣವಾಗಿದೆ. ಇಂದಿನ ಸಾಂಸ್ಕೃತಿಕ ಅಧಃಪತನಕ್ಕೆ ಪ್ರೇರಣೆ ನೀಡುತ್ತಿರುವ ಅಶ್ಲೀಲತೆಗೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಮೆಡಿಕಲ್ ಸರ್ವಿಸ್ ಸೆಂಟರ್ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ, ಕೆನರಾ ಬ್ಯಾಂಕ್ ಅಸೋಸಿಯೇಷನ್‌ನ ಎಸ್.ಆರ್. ಹಿರೇಮಠ, ಎಐಕೆಕೆಎಂಎಸ್ ರೈತ ಸಂಘಟನೆ ಅಖಿಲ ಭಾರತ ಉಪಾಧ್ಯಕ್ಷ ಟಿ.ಎಸ್.ಸುನೀತ್ ಕುಮಾರ್, ತಿಪ್ಪೇಸ್ವಾಮಿ, ಬನಶ್ರೀ, ನಾಗಜ್ಯೋತಿ, ಮಮತಾ, ಬಿ.ಎನ್. ರತ್ನಮಾಲಾ, ಕವಿತಾ, ಶಶಿಕುಮಾರ್, ಮನೋಜ್ ಕುಮಾರ್, ಟಿ.ಎಸ್.ಸುಮನ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ