ಕನ್ನಡಪ್ರಭ ವಾರ್ತೆ ಹಿರಿಯೂರು
ಪಶ್ಚಿಮ ಬಂಗಾಳದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನಗರದ ರಂಜಿತಾ ಹೋಟೆಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿದ ನಂತರ ಮಾತನಾಡಿಡ ಡಾ. ಗೋಪಾಲನಾಯ್ಕ, ಇದೊಂದು ಅಮಾನವೀಯ ಘಟನೆ. ಹೆಣ್ಣು ಮಕ್ಕಳ ರಕ್ಷಣೆಯ ಕಾನೂನುಗಳು ಇನ್ನಷ್ಟು ಬಲಗೊಳ್ಳಬೇಕು. ಜೀವ ಉಳಿಸುವ ಮಹತ್ತರ ಜವಾಬ್ದಾರಿ ಹೊತ್ತ ವೈದ್ಯರಿಗೆ ರಕ್ಷಣೆ ಇಲ್ಲವೆಂದರೆ ಹೇಗೆ? ವೈಯಕ್ತಿಕ ಬದುಕುಗಳನ್ನು ಬದಿಗಿಟ್ಟು ಕೆಲಸ ಮಾಡುವ ಮತ್ತು ಸಮಯದ ಹಂಗಿಲ್ಲದೇ ಸೇವೆ ಮಾಡುವ ವೈದ್ಯರ ಹಿತ ಕಾಯುವ ಕೆಲಸವಾಗಬೇಕು.ಇದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದ್ದು ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದರು.
ಸ್ತ್ರೀ ತಜ್ಞೆ ಡಾ. ಲತಾ ಮಾತನಾಡಿ ಸರ್ಕಾರಿ ಆಸ್ಪತ್ರೆಯ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ. ಅತ್ಯಂತ ಬುದ್ದಿವಂತರ ರಾಜ್ಯ ಎನಿಸಿರುವ ಪಶ್ಚಿಮ ಬಂಗಾಳದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಇಂತಹ ದುರ್ಘಟನೆ ನಡೆದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ನಮ್ಮದೇ ಮನೆಯ ಹೆಣ್ಣು ಮಕ್ಕಳಿಗೆ ಇಂತಹ ಸ್ಥಿತಿ ಬಂದರೆ ಹೇಗಾಗಬಹುದು ಎಂಬುದನ್ನು ಎಲ್ಲರೂ ಯೋಚಿಸುವಂತಾಗಬೇಕು.ವೈದ್ಯರು, ನರ್ಸ್ ಗಳು, ಸಿಬ್ಬಂದಿಗಳು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕಾಗುತ್ತದೆ. ಭಯದಲ್ಲೇ ಸೇವೆ ಮಾಡುವಂತಹ ಪರಿಸ್ಥಿತಿ ಯಾರಿಗೂ ಇರಬಾರದು. ಪ್ರೀತಿಯಿಂದ ನೆಮ್ಮದಿಯಿಂದ ಚಿಕಿತ್ಸೆ ನೀಡುವಂತಹ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಎಲ್ಲಾ ಸರ್ಕಾರಗಳ ಮೇಲಿದೆ ಎಂದರು.
ಮಕ್ಕಳ ತಜ್ಞ ಡಾ. ಮಹಲಿಂಗಪ್ಪ ಮಾತನಾಡಿ, ಸರ್ಕಾರಿ ವೈದ್ಯರು ಸಮಯದ ಹಂಗಿಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ. ನಾವೇ 24 ಗಂಟೆ, 48 ಗಂಟೆ ಕೆಲಸ ಮಾಡಿದ್ದೇವೆ. ನಿರಂತರವಾಗಿ ವೃತ್ತಿ ನಿರ್ವಹಿಸುವ ವೈದ್ಯರಿಗೆ ಸೂಕ್ತ ರಕ್ಷಣೆಯ ಅವಶ್ಯಕತೆ ಇದೆ. ಕಾನೂನುಗಳು ಇನ್ನಷ್ಟು ಕಠಿಣವಾಗಬೇಕು. ಸೇವೆ ಮಾಡುವವರ ಮಾನಸಿಕ ಸ್ಥೈರ್ಯ ಕಳೆಯುವ ಕೆಲಸ ಯಾರೂ ಮಾಡಬಾರದು ಎಂದರು.ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆ ಅಧ್ಯಕ್ಷ ಡಾ ಶಿವಣ್ಣರೆಡ್ಡಿ, ಡಾ. ಕಮಲಾ ನಾಯ್ಕ, ಡಾ. ನಿರಂಜನ್, ಡಾ. ರೋಹಿತ್, ಡಾ. ಸೌಮ್ಯ, ಡಾ. ವೆಂಕಟೇಶ್, ಡಾ. ಸಂದೀಪ್, ಡಾ. ಎಚ್ ಮೂರ್ತಿ, ಡಾ. ಹರ್ಷವರ್ಧನ್, ಡಾ. ವಿದ್ಯಾ, ಡಾ. ತಿಮ್ಮರಾಜು, ಡಾ. ಜಗನ್ನಾಥ್ ಮುಂತಾದವರು ಹಾಜರಿದ್ದರು.