ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಗುಂಬಳ್ಳಿ ಗ್ರಾಮದ ಪ್ರೌಢಶಾಲೆಯ ಶಿಕ್ಷಕ ಎಂ.ವೀರಭದ್ರಸ್ವಾಮಿಯನ್ನು ಅಮಾನತುಗೊಳಿಸಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕ್ರಮವನ್ನು ಖಂಡಿಸಿ ಬುಧವಾರ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಮಾತನಾಡಿ, ಡಿ.೨೮ ರಂದು ಶಾಲೆಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಸ್ ಚಾಲಕನಿಗೆ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಚಾಲನೆಗೊತ್ತಿದ್ದ ಇಲ್ಲಿನ ಶಿಕ್ಷಕ ಎಂ.ವೀರಭದ್ರಸ್ವಾಮಿ ಬಸ್‌ಅನ್ನು ಚಲಾಯಿಸಿ ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ನಂತರ ಚಾಲಕನಿಗೆ ಅಲ್ಲೇ ಚಿಕಿತ್ಸೆ ನೀಡಿ ಆತ ಚೇತರಿಸಿಕೊಂಡ ನಂತರ ಅಲ್ಲಿಂದ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ. ನಮ್ಮ ಮಕ್ಕಳನ್ನು ದೊಡ್ಡ ದುರಂತದಿಂದ ಇವರು ಪಾರು ಮಾಡಿ ಕರೆದುಕೊಂಡು ಬಂದಿದ್ದರೂ ಇವರನ್ನು ಏಕಾಏಕಿ ಅಮಾನತು ಮಾಡಲಾಗಿದೆ.ಈ ಶಾಲೆಯ ಪ್ರಾಮಾಣಿಕ ಶಿಕ್ಷಕರಾಗಿದ್ದು ಶಾಲೆಯ ಅಭಿವೃದ್ಧಿಗೆ, ಮಕ್ಕಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಈ ಶಾಲೆಯಲ್ಲಿ ೧೪೯ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ೬೧ ವಿದ್ಯಾರ್ಥಿಗಳಿದ್ದಾರೆ. ಈಗ ಪರೀಕ್ಷೆಯೂ ಹತ್ತಿರದಲ್ಲಿದೆ. ಇತರೆ ತರಗತಿಗಳ ಮಕ್ಕಳಿಗೂ ಪರೀಕ್ಷೆ ಇದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರನ್ನು ಅಮಾನತುಗೊಳಿಸಿರುವ ಕ್ರಮ ಖಂಡನೀಯ. ಕೂಡಲೇ ಇವರನ್ನು ವಾಪಸ್ ಸೇವೆಗೆ ಸೇರಿಸಿಕೊಂಡು ಈ ಶಾಲೆಗೆ ಅವರನ್ನು ಮರು ನೇಮಕ ಮಾಡಬೇಕು. ನಮ್ಮ ಮಕ್ಕಳೂ ಸಹ ಅವರು ಬಾರದೆ ನಾವು ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಬಂದು ಇವರ ಅಮಾನತಿನ ಆದೇಶವನ್ನು ಹಿಂಪಡೆಯುವ ತನಕ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೋಷಕರ ಎದುರಿಗೆ ಕುಳಿತು ಶಾಲೆಯ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಹಾಗೂ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನಂಜುಂಡಯ್ಯ ಭೇಟಿ ನೀಡಿ ನೀವು ತರಗತಿಗೆ ತೆರಳಿ ಎಂದು ಮನವೊಲಿಸುವ ಪ್ರಯತ್ನ ನಡೆಸಿದರೂ ವಿದ್ಯಾರ್ಥಿಗಳು ವೀರಭದ್ರಸ್ವಾಮಿಯ ಅಮಾನತನ್ನು ವಾಪಸ್ಸು ಪಡೆಯಬೇಕು. ಅವರು ಶಾಲೆಗೆ ಬರಬೇಕು ಆಗಲೇ ನಾವು ತಗರತಿಗೆ ಹೋಗುತ್ತೇವೆ ಎಂದು ಪಟ್ಟು ಹಿಡಿದು ಶಾಲೆಯ ಮುಂಭಾಗದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಎಸ್‌ಡಿಎಂಸಿ ಸದಸ್ಯರಾದ ಅಂಬಿಕಾ, ಪದ್ಮ, ಶಿವಣ್ಣ, ಸುಧಾ, ಸುಮ, ಸುಂದ್ರಮ್ಮ, ಚಿಕ್ಕಣ್ಣ, ಸಂತೋಷ್ ಮುಖಂಡರಾದ ನಂಜಯ್ಯ ಗ್ರಾಪಂ ಸದಸ್ಯ ಚಂದ್ರಶೇಖರ್, ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.